ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನವೆಂಬರ್ ತಿಂಗಳು ಪೂರ್ತಿ ಪುಸ್ತಕಗಳ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ ನೀಡಲಿವೆ.
ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ 704 ಶೀರ್ಷಿಕೆಗಳನ್ನು ಹೊರತಂದಿದೆ. ಮೌಲಿಕವಾದ, ಪ್ರಾಜ್ಞರಿಂದ ರಚಿತವಾದ ಈ ಕೃತಿಗಳನ್ನು ಓದುಗರಿಗೆ ಕೈಗೆಟಕುವ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶ ಪ್ರಾಧಿಕಾರದ್ದಾಗಿದೆ. ಎಲ್ಲ ಪುಸ್ತಕಗಳ ಮೇಲೆ ಶೇ 50 ರಷ್ಟು ರಿಯಾಯಿತಿ ಇರಲಿದೆ.
ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆ, ಜಿಲ್ಲೆಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಪ್ರಾಧಿಕಾರದ ಎಲ್ಲ ಸಿರಿಗನ್ನಡ ಮಳಿಗೆಗಳಲ್ಲಿ ರಿಯಾಯಿತಿ ಇರಲಿದೆ. ಪ್ರಾಧಿಕಾರದ ಜಾಲತಾಣ www.kannadapustakapradhikara.com ಮೂಲಕವೂ ಖರೀದಿಸಬಹುದು ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ತಿಳಿಸಿದ್ದಾರೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವೂ ತನ್ನ ಪ್ರಕಟಣೆಗಳಿಗೆ ಶೇ 50 ರಷ್ಟು ರಿಯಾಯಿತಿ ಘೋಷಿಸಿದೆ. ಪ್ರಾಧಿಕಾರದ ಜಾಲತಾಣ www.kuvempubhashabharathi.karnataka.gov.in ಮೂಲಕ ಪಡೆಯಬಹುದು ಎಂದು ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ್ ಕು.ಮಿರ್ಜಿ ಹೇಳಿದ್ದಾರೆ.
ಪುಸ್ತಕ ಮೇಳ
ರಾಜ್ಯೋತ್ಸವ ಹಾಗೂ ‘ಸುವರ್ಣ ಕರ್ನಾಟಕ-50’ರ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನವೆಂಬರ್ ತಿಂಗಳ ಪೂರ್ತಿ ಪುಸ್ತಕಗಳ ಪ್ರದರ್ಶನ, ಮಾರಾಟ ಮೇಳ ಹಮ್ಮಿಕೊಂಡಿದೆ. ಪುಸ್ತಕಗಳಿಗೆ ಶೇ 10ರಿಂದ ಶೇ 75ರವರೆಗೆ ರಿಯಾಯಿತಿ ನೀಡಲಾಗುತ್ತದೆ.
ಪರಿಷತ್ತು ಪ್ರಕಟಿಸಿರುವ ಎಲ್ಲಾ ಪ್ರಕಟಣೆಗಳು ಮಾರಾಟಕ್ಕೆ ಲಭ್ಯವಿರುತ್ತವೆ. ರಜಾ ದಿನಗಳಲ್ಲೂ ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಚಾಮರಾಜಪೇಟೆಯ ಕಸಾಪ ಕಚೇರಿ ಆವರಣದಲ್ಲಿ ಮೇಳ ನಡೆಯುತ್ತದೆ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.