ADVERTISEMENT

ಮಕ್ಕಳನ್ನು ಮೂಡಲಪಾಯಕ್ಕೆ ಕರೆತನ್ನಿ: ತಲ್ಲೂರು ಶಿವರಾಮ ಶೆಟ್ಟಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಅಗತ್ಯ ಪ್ರೋತ್ಸಾಹ ನೀಡುವುದಾಗಿ ಶಿವರಾಮ ಶೆಟ್ಟಿ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:12 IST
Last Updated 24 ಜೂನ್ 2025, 16:12 IST
ಕಾರ್ಯಕ್ರಮದಲ್ಲಿ ತಲ್ಲೂರು ಶಿವರಾಮ ಶೆಟ್ಟಿ ಅವರೊಂದಿಗೆ ಗಾಯಿತ್ರಿ ಕೆ.ಎಂ. ಸಮಾಲೋಚನೆ ನಡೆಸಿದರು. ಮೂಡಲಪಾಯ ಯಕ್ಷಗಾನ ಕಲಾವಿದ ಕಲ್ಮನೆ ಎ.ಎಸ್. ನಂಜಪ್ಪ, ಶ್ರೀನಿವಾಸ ಸಾಸ್ತಾನ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ತಲ್ಲೂರು ಶಿವರಾಮ ಶೆಟ್ಟಿ ಅವರೊಂದಿಗೆ ಗಾಯಿತ್ರಿ ಕೆ.ಎಂ. ಸಮಾಲೋಚನೆ ನಡೆಸಿದರು. ಮೂಡಲಪಾಯ ಯಕ್ಷಗಾನ ಕಲಾವಿದ ಕಲ್ಮನೆ ಎ.ಎಸ್. ನಂಜಪ್ಪ, ಶ್ರೀನಿವಾಸ ಸಾಸ್ತಾನ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮೂಡಲಪಾಯ ಯಕ್ಷಗಾನ ಪ್ರಕಾರ ಬೆಳವಣಿಗೆ ಹೊಂದಲು ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಈ ಕಲೆಯ ಬಗ್ಗೆ ಆಸಕ್ತಿ ಮೂಡಿಸಿ, ತರಬೇತಿ ಒದಗಿಸಬೇಕು’ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಭಿಪ್ರಾಯಪಟ್ಟರು. 

ಕರ್ನಾಟಕ ಯಕ್ಷಗಾನ ಅಕಾಡೆಮಿಯು ನಗರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಮೂಡಲಪಾಯ ಯಕ್ಷೋತ್ಸವ’ಕ್ಕೆ ಮಂಗಳವಾರ ಚಾಲನೆ ದೊರೆಯಿತು.

ಈ ವೇಳೆ ಮಾತನಾಡಿದ ಶಿವರಾಮ ಶೆಟ್ಟಿ, ‘ಮೂಡಲಪಾಯ ಕಲಾ ಪ್ರಕಾರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಿರಿಯ ಕಲಾವಿದರಿದ್ದಾರೆ. ಆದರೆ, ಹೊಸಬರು ಅಷ್ಟಾಗಿ ಬರುತ್ತಿಲ್ಲ. ಕರಾವಳಿ ಭಾಗದಲ್ಲಿ ಜನಪ್ರಿಯವಾಗಿರುವ ಯಕ್ಷಗಾನ ಕಲಾ ಪ್ರಕಾರಕ್ಕೆ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಜನಪ್ರತಿನಿಧಿಗಳು ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ. ಉಡುಪಿ ಜಿಲ್ಲೆಯೊಂದರಲ್ಲಿಯೇ 90 ಶಾಲೆಗಳಲ್ಲಿ ಯಕ್ಷಗಾನ ಕಲಿಸಲಾಗುತ್ತಿದೆ. ಇದರಿಂದ ಯಕ್ಷಗಾನ ಬೆಳವಣಿಗೆ ಹೊಂದುತ್ತಿದೆ. ಮೂಡಲಪಾಯದ ಹಿರಿಯ ಕಲಾವಿದರು ಮಕ್ಕಳಿಗೆ ಕಲೆಯ ಬಗ್ಗೆ ತರಬೇತಿ ಒದಗಿಸಬೇಕು’ ಎಂದರು.    

ADVERTISEMENT

‘ಮೂಡಲಪಾಯದ ಕಲಾವಿದರನ್ನು ಗುರುತಿಸಲು ಸಮ್ಮೇಳನ ನಡೆಸಬೇಕಾದ ಅಗತ್ಯವಿದೆ. ಸ್ಥಳೀಯ ಶಾಸಕರು, ದಾನಿಗಳು ಕೂಡ ಈ ಕಲಾ ಪ್ರಕಾರವನ್ನು ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಮೂಡಲಪಾಯದಲ್ಲಿ ಆಸಕ್ತಿ ಮೂಡಿಸಿದರೆ ಕರಾವಳಿ ಭಾಗದ ಯಕ್ಷಗಾನದಷ್ಟೇ ಈ ಕಲೆಯೂ ಜನಪ್ರಿಯವಾಗುತ್ತದೆ. ದೈವ ಕಲೆಯಾಗಿ ಯಕ್ಷಗಾನ ಸ್ವೀಕರಿಸಲ್ಪಟ್ಟ ಪರಿಣಾಮ, ಕೆಲ ಮೇಳಗಳಿಗೆ 10–20 ವರ್ಷಗಳು ಪ್ರದರ್ಶನ ಮುಂಚಿವಾಗಿ ಕಾಯ್ದಿರಿಸಲ್ಪಟ್ಟಿವೆ’ ಎಂದು ಹೇಳಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯಿತ್ರಿ ಕೆ.ಎಂ., ‘ಮೂಡಲಪಾಯ ಯಕ್ಷಗಾನ ಉಳಿಸಿ ಬೆಳೆಸುವ ನಿಟ್ಟಿನ‌ಲ್ಲಿ ಚ‌ರ್ಚೆಗಳು ನಡೆಯಬೇಕು. ಯಕ್ಷಗಾನ ಎಂದರೆ ಕರಾವಳಿ ಪ್ರದೇಶ ಎಂಬ ಭಾವನೆ ಇದೆ. ಬಯಲುಸೀಮೆಯ ಕಲೆಯಾಗಿರುವ ಮೂಡಲಪಾಯವನ್ನು ಗ್ರಾಮ ದೇವತೆಗಳ ಹಬ್ಬದ‌ಲ್ಲಿ ಕಾಣಬಹುದು. ಇದು ಹವ್ಯಾಸಿ ಕಲೆಯಾಗಿದ್ದು, ತಿರುಗಾಟ ಇಲ್ಲದಿರುವುದರಿಂದ ಕೆಲ ಪ್ರದೇಶಕ್ಕೆ ಸೀಮಿತಗೊಂಡಿದೆ. ವಿವಿಧ ಜಿಲ್ಲೆಗಳ‌ಲ್ಲಿ ಮೂಡಲಪಾಯವನ್ನು ಗಟ್ಟಿಗೊಳಿಸುವ ಕಾರ್ಯ ನಡೆಯುತ್ತಿದೆ’ ಎಂದರು. 

ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸ ಶ್ರೀನಿವಾಸ ಸಾಸ್ತಾನ, ‘25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕರಾವಳಿಯ ಯಕ್ಷಗಾನ ಹಾಗೂ ಮೂಡಲಪಾಯ ಯಕ್ಷಗಾನದ ಜುಗಲ್ ಬಂದಿ ನಡೆಸಲಾಗಿತ್ತು. ಈ ಎರಡೂ ಪ್ರಕಾರಗಳಲ್ಲಿ ಸಾಮ್ಯತೆಯಿದೆ’ ಎಂದರು. 

ಇದಕ್ಕೆ ‍ಪೂರಕವಾಗಿ ಮಾತನಾಡಿದ ಅಕಾಡೆಮಿ ಸದಸ್ಯ ವಿದ್ಯಾಧರ ಜಲವಳ್ಳಿ, ‘ಕರಾವಳಿಯ ಯಕ್ಷಗಾನ ಹಾಗೂ ಮೂಡಲಪಾಯ ಯಕ್ಷಗಾನದ ಜುಗಲ್ ಬಂದಿಯನ್ನು ಉಡುಪಿ ಅಥವಾ ಬೆಂಗಳೂರಿನಲ್ಲಿ ಈಗ ಮತ್ತೆ ನಡೆಸಬೇಕು’ ಎಂದು ಅಕಾಡೆಮಿ ಅಧ್ಯಕ್ಷರಿಗೆ ಮನವಿ ಮಾಡಿದರು. 

ಬಳಿಕ ಮೂಡಲಪಾಯ ತಾಳಮೇಳ, ವಿಚಾರಸಂಕಿರಣ ಹಾಗೂ ಬೊಂಬೆಯಾಟ ನಡೆಯಿತು.

ಕರಾವಳಿಯ ಯಕ್ಷಗಾನಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯ ಮಹತ್ವವು ಮೂಡಲಪಾಯ ಯಕ್ಷಗಾನ‌ಕ್ಕೂ ಸಿಗಬೇಕು. ಇಲ್ಲಿರುವ ಕಲಾವಿದರನ್ನು ಮುಖ್ಯವಾಹಿನಿಗೆ ತರಬೇಕು
-ಚಿಕ್ಕಣ್ಣ ಯಣ್ಣೆಕಟ್ಟೆ, ಮೂಡಲಪಾಯ ಯಕ್ಷಗಾನ ವಿದ್ವಾಂಸ
ಸಮಯದ ಇಳಿಕೆ ವೇಷ–ಭೂಷಣದಲ್ಲಿ ಸಣ್ಣಪುಟ್ಟ ಬದಲಾವಣೆಯೊಂದಿಗೆ ಕಲೆಯನ್ನು ಬೆಳೆಸಬೇಕು. ಮಕ್ಕಳಿಗೆ ಈ ಕಲೆಯನ್ನು ಕಲಿಸಬೇಕು. ರಾಜ್ಯದ ವಿವಿಧೆಡೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು
-ಶ್ರೀನಿವಾಸ ಸಾಸ್ತಾನ, ಯಕ್ಷಗಾನ ವಿದ್ವಾಂಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.