ADVERTISEMENT

ರಾಜ್ಯ ಕೇಡರ್‌ಗೆ 27 ಐಎಎಸ್‌: ಬಡ್ತಿ ಪ್ರಕ್ರಿಯೆಗೆ ಪಟ್ಟಿ ಕೇಳಿದ ಡಿಒಪಿಟಿ

ರಾಜೇಶ್ ರೈ ಚಟ್ಲ
Published 9 ಜೂನ್ 2020, 22:03 IST
Last Updated 9 ಜೂನ್ 2020, 22:03 IST

ಬೆಂಗಳೂರು: ಕೆಎಎಸ್‌ನಿಂದ (ರಾಜ್ಯ ನಾಗರಿಕ ಸೇವೆ) ಬಡ್ತಿ ನೀಡಲು ಮತ್ತು ನಾನ್‌ ಕೆಎಎಸ್‌ನಿಂದ ಆಯ್ಕೆ ಮಾಡಲು 27 ಐಎಎಸ್‌ (ಕರ್ನಾಟಕ ಕೇಡರ್) ಖಾಲಿ ಹುದ್ದೆಗಳನ್ನು ನಿರ್ಣಯಿಸಿರುವ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ), ಈ ಸಂಬಂಧ ಆಯ್ಕೆ ಪ್ರಕ್ರಿಯೆಗೆ ಅಧಿಕಾರಿಗಳ ಪಟ್ಟಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ಹೈಕೋರ್ಟ್ ಮತ್ತು ಕೇಂದ್ರ ಆಡಳಿತ ನ್ಯಾಯಮಂಡಳಿಯಲ್ಲಿ (ಸಿಎಟಿ) ಪ್ರಕರಣಗಳು (11 ಐಎಎಸ್‌ ಅಧಿಕಾರಿಗಳ ಹಿಂಬಡ್ತಿ) ಬಾಕಿ ಇರುವುದರಿಂದ 2015ನೇ ಸಾಲಿನಲ್ಲಿ ಐಎಎಸ್‌ ಖಾಲಿ ಹುದ್ದೆಗಳಿಗೆ ಬಡ್ತಿ ನೀಡಿದ್ದ ಪಟ್ಟಿಯನ್ನು ಸದ್ಯ ಮರು ಪರಿಶೀಲಿಸಲು ಸಾಧ್ಯ ಇಲ್ಲವೆಂದು ಡಿಒಪಿಟಿಗೆ ರಾಜ್ಯ ಸರ್ಕಾರ ಡಿ.16 ಮತ್ತು ಮಾರ್ಚ್ 19ರಂದು ಪತ್ರ ಬರೆದಿತ್ತು.

ಈ ಪತ್ರಗಳ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ ಜೂನ್‌ 3ರಂದು ಪತ್ರ ಬರೆದಿರುವ ಡಿಒಪಿಟಿ, ಐಎಎಸ್‌ (ನೇಮಕಾತಿ) ನಿಯಮಗಳ ಪ್ರಕಾರ, ಕೆಎಎಸ್‌ನಿಂದ ಬಡ್ತಿ ನೀಡಿ ನೇಮಕಾತಿ ಮಾಡಿಕೊಳ್ಳಲು ಮತ್ತು ಕೆಎಎಸ್‌ಯೇತರದಿಂದ ಆಯ್ಕೆ ಮಾಡಲು 2016ರಿಂದ 2019ರ ಸಾಲುಗಳಲ್ಲಿ ಖಾಲಿ ಇರುವ ಐಎಎಸ್‌ ಹುದ್ದೆಗಳ ಸಂಖ್ಯೆ ನಿರ್ಣಯಿಸಿ ಮಾಹಿತಿ ನೀಡಿದೆ.

ADVERTISEMENT

‘2016 ಸಾಲಿಗೆ 12 ಐಎಎಸ್‌ ಖಾಲಿ ಹುದ್ದೆಗಳಿಗೆ ಕೆಎಎಸ್‌ನಿಂದ ಬಡ್ತಿ ನೀಡಲು ಲಭ್ಯವಿದೆ. ಈ ಹಿಂದೆ, 11 ಖಾಲಿ ಹುದ್ದೆ ಎಂದು ನಿರ್ಣಯಿಸಿ ಮಾಹಿತಿ ನೀಡಲಾಗಿತ್ತು’ ಎಂದು ಪತ್ರದಲ್ಲಿ ಡಿಒಪಿಟಿ ಸ್ಪಷ್ಟಪಡಿಸಿದೆ. ಕೆಎಎಸ್‌ನಿಂದ ಬಡ್ತಿ ನೀಡಿ ನೇಮಕಾತಿ ಮಾಡಿಕೊಳ್ಳಲು 2017, 2018 ಮತ್ತು 2019ರ ಸಾಲುಗಳಲ್ಲಿ ಕ್ರಮವಾಗಿ 2, 3 ಮತ್ತು 9 ಐಎಎಸ್‌ ಖಾಲಿ ಹುದ್ದೆಗಳನ್ನು ನಿರ್ಣಯಿಸಲಾಗಿದೆ. ಕೆಎಎಸ್‌ಯೇತರ ಅಧಿಕಾರಿಗಳಿಂದ 2019ರ ಐಎಎಸ್ ಆಯ್ಕೆ ಪಟ್ಟಿಗೆ ಆಯ್ಕೆ ಮಾಡಲು ಒಂದು ಖಾಲಿ ಹುದ್ದೆ ಮಾತ್ರ ನಿರ್ಣಯಿಸಲಾಗಿದೆ ಎಂದೂ ಪತ್ರದಲ್ಲಿದೆ.

ಹೈಕೋರ್ಟ್‌ ತೀರ್ಪಿನಂತೆ 1998ನೇ ಸಾಲಿನ ಕೆಎಎಸ್‌ ಅಧಿಕಾರಿಗಳ ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿಯನ್ನು 2019ರ ಆಗಸ್ಟ್‌ 20ರಂದು ಕೆಪಿಎಸ್‌ಸಿ ಪ್ರಕಟಿಸಿದೆ. ಹೀಗಾಗಿ, 1998ರ ಸಾಲಿನಿಂದ 2015ರ ಸಾಲಿನ ಐಎಎಸ್‌ ಖಾಲಿ ಹುದ್ದೆಗೆ ಆಯ್ಕೆಯಾದ 11 ಅಧಿಕಾರಿಗಳು ಹಿಂಬಡ್ತಿ ಭೀತಿ ಎದುರಿಸುತ್ತಿದ್ದಾರೆ. ಈ ವ್ಯಾಜ್ಯ ಇತ್ಯರ್ಥ ಆಗದಿರುವುದರಿಂದ, ನಂತರದ ಸಾಲುಗಳಲ್ಲಿ ಕರ್ನಾಟಕ ಕೇಡರ್‌ನಿಂದ ಐಎಎಸ್‌ಗೆ ಬಡ್ತಿ ನೀಡಲು ಡಿಒಪಿಟಿ ಈವರೆಗೆ ಮುಂದಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.