ADVERTISEMENT

ಮಹೇಶ ಜೋಶಿ ಅವರಿಂದ ವಿಷಯಾಂತರ ಮಾಡುವ ಯತ್ನ: ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರ ಆರೋಪ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 15:51 IST
Last Updated 8 ಅಕ್ಟೋಬರ್ 2025, 15:51 IST
ಕಸಾಪ ಲೋಗೊ
ಕಸಾಪ ಲೋಗೊ   

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಅವರು ತಮ್ಮ ಮೇಲಿನ ಆರೋಪಗಳನ್ನು ಮುಚ್ಚಿ ಹಾಕಿಕೊಳ್ಳಲು, ವಿಷಯಾಂತರ ಮಾಡುವ ಮೂಲಕ ವ್ಯವಸ್ಥೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಆರೋಪಿಸಿದ್ದಾರೆ.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೆಚ್ಚ ಸೇರಿ ಇತ್ತೀಚಿನ ವಿವಿಧ ಬೆಳವಣಿಗೆಗಳ ಬಗ್ಗೆ ಲೋಕಾಯುಕ್ತರಿಂದ ತನಿಖೆ ಮಾಡಿಸುವಂತೆ ಜಮಖಂಡಿಯಲ್ಲಿ ನಡೆದ ಕಸಾಪ ಕಾರ್ಯಕಾರಿ ಸಭೆ ನಿರ್ಧಾರ ಕೈಗೊಂಡಿದೆ.

ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಎಸ್.ಜಿ.ಸಿದ್ಧರಾಮಯ್ಯ, ಬಿ.ಜಯಪ್ರಕಾಶಗೌಡ, ಬಂಜಗೆರೆ ಜಯಪ್ರಕಾಶ್, ಕೆ.ಎಸ್.ವಿಮಲಾ, ಶ್ರೀಪಾದ ಭಟ್ ಹಾಗೂ ಮಾವಳ್ಳಿ ಶಂಕರ್ ಅವರು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ADVERTISEMENT

‘ಮಹೇಶ ಜೋಶಿ ಅವರು ಆರೋಪಿಸಿರುವ ವ್ಯಕ್ತಿಗಳ ಮತ್ತು ಸಂಸ್ಥೆಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಯಬೇಕಾದ ಸಂದರ್ಭ ಬಂದಾಗ ನಡೆಯಲಿ. ಆದರೆ, ಅದಕ್ಕೂ ಮೊದಲು ಆಯಾ ಸಂಘ ಸಂಸ್ಥೆಗಳ ವಿರುದ್ಧ ದೂರುಗಳು ಬಂದಾಗ, ನಿಯಮಾನುಸಾರ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಗೆ ಮತ್ತು ಇಲಾಖೆಗಳಿಗೆ ವಿಚಾರಣೆ ಮಾಡಲು ಅಧಿಕಾರವಿದೆ. ಅವುಗಳು ವಿಫಲವಾದಲ್ಲಿ ಲೋಕಾಯುಕ್ತದ ಹಂತಕ್ಕೆ ಹೋಗಬಹುದು’ ಎಂದು ಹೇಳಿದ್ದಾರೆ.

‘ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ತೆರಿಗೆ ಹಣದಿಂದ ಅನುದಾನ ಪಡೆಯುತ್ತಿರುವುದರಿಂದ, ಪರಿಷತ್ತಿನ ಸದಸ್ಯರು ಮತ್ತು ಕನ್ನಡಿಗರು ಪ್ರಶ್ನಿಸಬಹುದಾಗಿದೆ. ಅವರು ಹೇಳಿರುವ ಸಂಘ-ಸಂಸ್ಥೆಗಳ ಮತ್ತು ವ್ಯಕ್ತಿಗಳ ಮೇಲೆ ಆರೋಪಿಸಲು ಹಾಗೂ ದೂರು ನೀಡಲು ಆಯಾ ಸಂಸ್ಥೆಗಳ ಸದಸ್ಯರು ಮತ್ತು ಕನ್ನಡಿಗರು ಹಕ್ಕುಳ್ಳವರಾಗಿದ್ದಾರೆ. ಅದರಂತೆ ಕ್ರಮಬದ್ಧವಾಗಿ ಕೆಳಹಂತದಿಂದ ದೂರು ಸಲ್ಲಿಸಿ ಮುಂದುವರಿಯಬೇಕೆ ಹೊರತು, ಈ ರೀತಿಯಾಗಿ ಬುಡವನ್ನು ಬಿಟ್ಟು ತುದಿಯನ್ನು ಹಿಡಿದು ಅಲ್ಲಾಡಿಸುವುದು ಮೂರ್ಖತನ ಮತ್ತು ಅತ್ಯಂತ ಖಂಡನೀಯ’ ಎಂದಿದ್ದಾರೆ.

‘ಕಸಾಪ ಅಧ್ಯಕ್ಷರು ಆರೋಪಿಸಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದವರು ವಿಚಾರಣೆಗೆ ಒಳಗಾಗಲು ಸಿದ್ಧರಿದ್ದಾರೆ. ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಸದಾ ವಿವಾದಕ್ಕೆ ಒಳಗಾಗಿರುವ ಜೋಶಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಆಡಳಿತಾಧಿಕಾರಿಯನ್ನು ಒಪ್ಪಿಕೊಂಡು ತನಿಖೆ ಮತ್ತು ವಿಚಾರಣೆಗೆ ಅನುವು ಮಾಡಿಕೊಡಲಿ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.