ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ. ಪರಿಷತ್ತಿನ ಕಾರ್ಯಚಟುವಟಿಕೆಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಹೇಳಿದರು.
ಬುಧವಾರ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಕೈಗೊಳ್ಳಲಾದ ತೀರ್ಮಾನಗಳು ಹಾಗೂ ಬೈ–ಲಾ ತಿದ್ದುಪಡಿ ಸೇರಿದಂತೆ ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಕಸಾಪ ಸ್ಥಾಪನೆಯಾದಾಗಿನಿಂದಲೂ ಬೈ–ಲಾ ತಿದ್ದುಪಡಿ ಆಗುತ್ತಲೇ ಬಂದಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್.ಪಾಚ್ಚಾಪೂರೆ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ‘ನಿಬಂಧನೆ ತಿದ್ದುಪಡಿ ಸಲಹಾ ಉಪಸಮಿತಿ’ಯ ಶಿಫಾರಸಿನ ಅನುಸಾರ ಈಗ ಬೈ–ಲಾ ತಿದ್ದುಪಡಿ ಮಾಡಲಾಗುತ್ತಿದೆ. ಪರಿಷತ್ತಿನ ಘನತೆ ಗೌರವಗಳನ್ನು ಎತ್ತಿ ಹಿಡಿಯುವ ಜೊತೆಗೆ, ಸಮಕಾಲೀನ ಸವಾಲುಗಳಿಗೆ ಸ್ಪಂದಿಸುವ ಉದ್ದೇಶವನ್ನು ಹೊಂದಲಾಗಿದೆ. ಸರ್ವಾಧಿಕಾರಿಯಾಗಲು, ಪರಮಾಧಿಕಾರ ಪಡೆಯಲು ಈ ತಿದ್ದುಪಡಿ ಮಾಡುತ್ತಿಲ್ಲ. ಅನಗತ್ಯವಾಗಿ ಕೆಲವರು ಆರೋಪ ಮಾಡುತ್ತಿದ್ದಾರೆ’ ಎಂದರು.
‘ಸಮಾನ ಮನಸ್ಕರ ವೇದಿಕೆಯಡಿ ಉದ್ದೇಶಪೂರ್ವಕ ಹಾಗೂ ಪೂರ್ವಗ್ರಹಪೀಡಿತರಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾ, ಪರಿಷತ್ತಿನ ವಿರುದ್ಧ ಪ್ರತಿಭಟನಾ ಸಭೆ ನಡೆಸಲಾಗುತ್ತಿದೆ. ಈ ವೇದಿಕೆಯ ಪ್ರತಿಭಟನಾ ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಕೂಡ ಪಾಲ್ಗೊಂಡಿದ್ದರು. ರಾಜಕಾರಣಿಯಾದ ಅವರು ಈ ರೀತಿ ಪರಿಷತ್ತಿನ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದು ಸರಿಯಲ್ಲ. ಮುಂದಿನ ದಿನಗಳಲ್ಲಿ ಪರಿಷತ್ತಿನ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಿದರೆ, ಕಾರ್ಯಕಾರಿ ಸಮಿತಿ ಜತೆಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಪರಿಷತ್ತಿನ ಧ್ಯೇಯೋದ್ದೇಶಗಳ ಅನುಷ್ಠಾನಕ್ಕಾಗಿ, ವಿವಿಧ ಕಾರ್ಯಕಲಾಪಗಳನ್ನು ಸುಸೂತ್ರವಾಗಿ ನಡೆಸಲು ಉಪ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ನಾಡಿನ ಚಿಂತಕರು, ಕನ್ನಡಿಗರೊಂದಿಗೆ ಸಮಾಲೋಚನೆ ನಡೆಸಲು, ವಾಸ್ತವಿಕತೆ ಮನವರಿಕೆ ಮಾಡಲು ಈ ಉಪ ಸಮಿತಿ ಸಹಕಾರಿಯಾಗಲಿದೆ. ಇದರಲ್ಲಿ ಕಸಾಪ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಇರಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪರಿಷತ್ತಿನ ಬಗ್ಗೆ ನಿಖರ ಮಾಹಿತಿಗಳನ್ನು ಪ್ರಸಾರ ಮಾಡುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.