ADVERTISEMENT

ವಾರ್ಷಿಕ ಸಭೆ: ಕಸಾಪ ಅಧ್ಯಕ್ಷರ ನಡೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 15:53 IST
Last Updated 20 ಆಗಸ್ಟ್ 2025, 15:53 IST
<div class="paragraphs"><p>ಮಹೇಶ ಜೋಶಿ, ಕ<ins>ಸಾಪ ಅಧ್ಯಕ್ಷ</ins>&nbsp;</p></div>

ಮಹೇಶ ಜೋಶಿ, ಕಸಾಪ ಅಧ್ಯಕ್ಷ 

   

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಸರ್ವ ಸದಸ್ಯರ ಸಭೆಯನ್ನು ಕಾರ್ಯಕಾರಿ ಸಮಿತಿ ನಿರ್ಧಾರ ಮಾಡಬೇಕೇ ಹೊರತು, ಅಧ್ಯಕ್ಷರೊಬ್ಬರೇ ತೀರ್ಮಾನಿಸಿ ಘೋಷಿಸುವುದು ಎಷ್ಟರಮಟ್ಟಿಗೆ ಸರಿ’ ಎಂದು ಕಸಾಪ ಆಜೀವ ಸದಸ್ಯರಾದ ಸಮಾನ ಮನಸ್ಕರು ಪ್ರಶ್ನಿಸಿದ್ದಾರೆ.‌

ಕಲ್ಹಳ್ಳಿಯಲ್ಲಿ ಕಸಾಪ ವಾರ್ಷಿಕ ಸಭೆ ನಡೆಸುವ ನಿರ್ಧಾರಕ್ಕೆ ಸಮಾನ ಮನಸ್ಕರು ವೇದಿಕೆ ಸಂಚಾಲಕರಾದ ಎಸ್.ಜಿ. ಸಿದ್ಧರಾಮಯ್ಯ, ಆರ್‌.ಜಿ. ಹಳ್ಳಿ ನಾಗರಾಜ್ ಮತ್ತು ಜಾಣಗೆರೆ ವೆಂಕಟರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ‘ಕಸಾಪ ವಾರ್ಷಿಕ ಸಭೆಯನ್ನು ದೂರದ ಕಲ್ಹಳ್ಳಿ ಗ್ರಾಮದ ‘ಸುಮ್ಮನೆ’ ಆಶ್ರಮದಲ್ಲಿ ನಡೆಸಲು ಕಸಾಪ ಅಧ್ಯಕ್ಷ ಮಹೇಶ ಜೋಶಿ ನಿರ್ಧಾರ ಮಾಡಿದ್ದಾರೆ. ಈ ಸಂಬಂಧ ಕಾರ್ಯಕಾರಿ ಸಮಿತಿಯ ಅನುಮೋದನೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಅವರ ಈ ಸರ್ವಾಧಿಕಾರಿ ಧೋರಣೆ ಖಂಡನೀಯ’ ಎಂದಿದ್ದಾರೆ.

ADVERTISEMENT

‘ಕಸಾಪ ಆಜೀವ ಸದಸ್ಯರಾದ ನಾವು, ಹಾಲಿ ಅಧ್ಯಕ್ಷರ ದುರಾಡಳಿತ ಮತ್ತು ಆರ್ಥಿಕ ಅಕ್ರಮಗಳ ವಿರುದ್ಧ ಧ್ವನಿಯೆತ್ತುವ ಪ್ರಯತ್ನ ಮಾಡಿದ್ದೇವಷ್ಟೆ. ನಮ್ಮ ಮನವಿಗೆ ಸಹಕಾರ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಪಂದಿಸಿ, ಕಸಾಪ ಅಧ್ಯಕ್ಷರನ್ನು ವಿಚಾರಣೆಗೊಳಪಡಿಸಲು ಆದೇಶಿಸಿದೆ. ಈ ಹಂತದಲ್ಲಿ ಕಾರ್ಯಕಾರಿ ಸಮಿತಿ ಸಭೆಯ ಅನುಮೋದನೆ ಪಡೆಯದೆ, ವಾರ್ಷಿಕ ಸಭೆಯನ್ನು ಅಧ್ಯಕ್ಷರೇ ಘೋಷಿಸುವುದು ನಿಯಮ ಬಾಹಿರ’ ಎಂದು ಹೇಳಿದ್ದಾರೆ.

‘ಸಾರಿಗೆ-ವಸತಿ-ಆಹಾರ ಮತ್ತಿತರ ಸೌಲಭ್ಯಗಳ ಕೊರತೆಯಿರುವ ಊರಲ್ಲಿ ಸಭೆ ನಡೆಸಿ, ತಾವಂದುಕೊಂಡಿರುವ ಕಾರ್ಯಸೂಚಿಗಳಿಗೆ ಮತ್ತು ಅವ್ಯವಹಾರಗಳಿಗೆ ಕೆಲವೇ ಸದಸ್ಯರು ಹಾಗೂ ಬೇನಾಮಿ ಸದಸ್ಯರಿಂದ ಅನುಮೋದನೆ ಪಡೆದುಕೊಳ್ಳುವ ತಂತ್ರಗಾರಿಕೆ ಪ್ರಜಾಸತ್ತಾತ್ಮಕ ನಡೆಯಾಗುವುದಿಲ್ಲ. ರಾಜ್ಯದ ಎಲ್ಲ ಭಾಗಗಳಿಂದ ಸದಸ್ಯರು ಬಂದು ಭಾಗವಹಿಸಲು ಅನುಕೂಲವಿರುವ ಜಿಲ್ಲಾ ಕೇಂದ್ರಗಳಲ್ಲಿ ವಾರ್ಷಿಕ ಸಭೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.