ADVERTISEMENT

‘ಕೆಎಟಿ ಅಧ್ಯಕ್ಷರ ಕೆಲಸಕ್ಕೆ ಎಷ್ಟು ಸಂಬಳ ಕೊಡಬೇಕು ಅಷ್ಟು ಕೊಡಲಾಗುತ್ತಿದೆ’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 19:57 IST
Last Updated 30 ಅಕ್ಟೋಬರ್ 2018, 19:57 IST

ಬೆಂಗಳೂರು: ‘ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಅಧ್ಯಕ್ಷರಿಗೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ನೀಡುವಷ್ಟೇ ವೇತನ ನೀಡಲಾಗದು’ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತಂತೆ ಕೆಎಟಿ ಅಧ್ಯಕ್ಷ ಡಾ.ಕೆ.ಭಕ್ತವತ್ಸಲ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಸಹಾಯಕ ಸಾಲಿಸಿಟರ್‌ ಜನರಲ್‌ ಸಿ.ಶಶಿಕಾಂತ್ ವಾದ ಮಂಡಿಸಿ, ‘ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಂಗ ಕೆಲಸದ ಜೊತೆಗೆ ರಾಜ್ಯದಾದ್ಯಂತ ಇರುವ 25 ಸಾವಿರಕ್ಕೂ ಹೆಚ್ಚು ನೌಕರರ ಆಡಳಿತಾತ್ಮಕ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಾರೆ. ಇವರ ಕೆಲಸದಲ್ಲಿ ಶೇ 10ರಷ್ಟನ್ನೂ ಕೆಎಟಿ ಅಧ್ಯಕ್ಷರು ಮಾಡುವುದಿಲ್ಲ’ ಎಂದರು.

ADVERTISEMENT

‘ಆಡಳಿತ ನ್ಯಾಯಮಂಡಳಿ ಕಾಯ್ದೆ– 1985 ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳ ಸೇವೆ ಮತ್ತು ಷರತ್ತುಗಳು ಕಾಯ್ದೆ 1954ರ ಪ್ರಕಾರ ಕೆಎಟಿ ಅಧ್ಯಕ್ಷರ ವೇತನದಲ್ಲಿ ತಾರತಮ್ಯ ತೋರಿಸುವ ಯಾವುದೇ ಅಂಶಗಳಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು’ ಎಂದು ಕೋರಿದರು.

ಅರ್ಜಿದಾರರು ಮತ್ತು ಪ್ರತಿವಾದಿಗಳ ಪರ ವಾದ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿದೆ.

‘ಸಮಾನ ಕೆಲಸಕ್ಕೆ-ಸಮಾನ ವೇತನ ಎಂಬ ನೀತಿಯಡಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ನೀಡುವಷ್ಟೇ ವೇತನವನ್ನು ನನಗೂ ನೀಡಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.