ಬೆಂಗಳೂರು: ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗೆ ಸಂಬಂಧಿಸಿದಂತೆ ಖುದ್ದು ಹಾಜರಾಗಿ ಉತ್ತರ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಉಪ ಲೋಕಾಯುಕ್ತರು ಸಮನ್ಸ್ ಜಾರಿ ಮಾಡಿದ್ದಾರೆ.
2022ರ ಸೆಪ್ಟೆಂಬರ್ 22ರಂದು ಲೋಕಾಯುಕ್ತ ತಂಡ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ವೈದ್ಯರು, ಸಿಬ್ಬಂದಿ ಗೈರಾಗಿರುವುದು, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದಿರುವುದು, ಕೆಲ ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಲು ರೋಗಿಗಳಿಂದ ಹಣಕ್ಕೆ ಬೇಡಿಕೆ ಸಲ್ಲಿಸಿರುವುದು ಕಂಡು ಬಂದಿತ್ತು.
ಈ ಸಂಬಂಧ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ವರದಿ ನೀಡುವಂತೆ ನೋಟಿಸ್ ನೀಡಲಾಗಿತ್ತು. ಆದರೂ ನೋಟಿಸ್‌ಗೆ ಉತ್ತರ ನೀಡಿರಲಿಲ್ಲ. ಹಾಗಾಗಿ ಜೂನ್ 26ರಂದು ಖುದ್ದು ಹಾಜರಾಗಿ ವರದಿಗೆ ಉತ್ತರ ನೀಡುವಂತೆ ಸಮನ್ಸ್ ಜಾರಿ ಮಾಡಲಾಗಿದೆ. ಈ ಸಮನ್ಸ್‌ಗೂ ಅವರು ಪ್ರತಿಕ್ರಿಯಿಸದಿದ್ದಲ್ಲಿ ವಾರಂಟ್ ನೀಡುವುದು ಅನಿವಾರ್ಯ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.