ಬೆಂಗಳೂರು: ‘ರೋಗಿಗಳ ಹಿತದೃಷ್ಟಿಯಿಂದ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಯ ಘಟಕದ ಸಮಯವನ್ನು ವಿಸ್ತರಿಸಿ, ರಾತ್ರಿಯೂ ವೈದ್ಯಕೀಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಎಸ್. ಸುರೇಶ್ ಕುಮಾರ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ‘ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಘಟಕ ಪ್ರಾರಂಭವಾಗಿರುವುದು ಬೆಂಗಳೂರು ಉತ್ತರ ಭಾಗದ ಜನರಿಗೆ ಅನುಕೂಲವಾಗಿದೆ. ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಬಗ್ಗೆ ವೈದ್ಯರಿಂದ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಕಳೆದ 11 ತಿಂಗಳಲ್ಲಿ ಸುಮಾರು 23 ಸಾವಿರಕ್ಕೂ ಅಧಿಕ ಮಂದಿ ಹೃದ್ರೋಗ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಘಟಕವು ಪ್ರತಿನಿತ್ಯ ಸಂಜೆ 4 ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಬಳಿಕ ಯಾವುದೇ ವೈದ್ಯರು ಇರುವುದಿಲ್ಲ. ಇದರಿಂದಾಗಿ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಬಳಿಕ ಬಂದ ರೋಗಿಗಳಿಗೆ ತುರ್ತು ಚಿಕಿತ್ಸೆಯೂ ಸಿಗುತ್ತಿಲ್ಲ. ಈ ರೀತಿ ಪ್ರಕರಣಗಳು ಗಮನಕ್ಕೆ ಬಂದಿವೆ’ ಎಂದು ಹೇಳಿದ್ದಾರೆ.
‘ಹೃದಯ ಸಂಬಂಧಿ ಸಮಸ್ಯೆಗಳಿಗೆ ತುರ್ತಾಗಿ ಚಿಕಿತ್ಸೆ ಅಗತ್ಯ. ಸಂಜೆಯ ಬಳಿಕವೇ ಹೆಚ್ಚಿನವರು ಚಿಕಿತ್ಸೆಗೆ ಆಸ್ಪತ್ರೆಗಳಿಗೆ ತೆರಳುತ್ತಾರೆ. ಆದ್ದರಿಂದ 4 ಗಂಟೆಗೆ ಸೇವೆ ಸ್ಥಗಿತಗೊಳಿಸುವುದು ಸೂಕ್ತವಲ್ಲ. ರಾತ್ರಿಯೂ ಈ ಘಟಕ ಕಾರ್ಯೋನ್ಮುಖವಾಗುವಂತೆ ಮಾಡಬೇಕು. ಈ ಬಗ್ಗೆ ಆದಷ್ಟು ಬೇಗ ಕ್ರಮಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.