ADVERTISEMENT

ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ: 7 ಸ್ಥಳಗಳಿಂದ ‘ಪುರಜ್ಯೋತಿ’ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:13 IST
Last Updated 25 ಜೂನ್ 2025, 16:13 IST
–
   

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ದಿನಾಚರಣೆ ಅಂಗವಾಗಿ, ನಗರ ಹಾಗೂ ಸುತ್ತಮುತ್ತಲಿನ ಏಳು ಪ್ರಮುಖ ತಾಣಗಳಿಂದ ‘ಪುರಜ್ಯೋತಿ’ ಮೆರವಣಿಗೆಯಲ್ಲಿ ಸಾಗಿ, ಕೆಂಪೇಗೌಡ ಭವನದ ನಿರ್ಮಾಣ ಸ್ಥಳಕ್ಕೆ ಜೂನ್‌ 27ರಂದು ಬರಲಿವೆ.

ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ರಾಜ್ಯಮಟ್ಟದ ಕಾರ್ಯಕ್ರಮ ಸುಮನಹಳ್ಳಿ ಬಳಿಯಿರುವ ಬಾಬು ಜಗಜೀವನ್ ರಾಂ ಭವನದಲ್ಲಿ ಶುಕ್ರವಾರ 12.30ಕ್ಕೆ ನಡೆಯಲಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯಮಟ್ಟದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ನಗರದ ನಾಲ್ಕು ದಿಕ್ಕುಗಳಲ್ಲಿರುವ (ಲಾಲ್ ಬಾಗ್, ಮೇಕ್ರಿ ವೃತ್ತ, ಕೆಂಪಾಂಬುದಿ ಕೆರೆ ಹಾಗೂ ಹಲಸೂರು) ಗಡಿ ಗೋಪುರ ಹಾಗೂ ಐತಿಹಾಸಿಕ ಸ್ಥಳಗಳಾದ ಮಾಗಡಿ ತಾಲ್ಲೂಕಿನ ಕೆಂಪಾಪುರ, ದೇವನಹಳ್ಳಿ ತಾಲ್ಲೂಕಿನಲ್ಲಿರುವ ಆವತಿ ಹಾಗೂ ಕುಣಿಗಲ್ ತಾಲ್ಲೂಕಿನ ಹುತ್ತರಿ ದುರ್ಗದಿಂದ ಶುಕ್ರವಾರ ಬೆಳಿಗ್ಗೆ 7ಕ್ಕೆ ‘ಪುರಜ್ಯೋತಿ’ ಹೊರಟು, ಸುಮನಹಳ್ಳಿ ವೃತ್ತದ ಬಳಿಯ ಹೊರವರ್ತುಲ ರಸ್ತೆಯಲ್ಲಿ ಕೆಂಪೇಗೌಡ ಭವನದ ನಿರ್ಮಾಣ ಸ್ಥಳಕ್ಕೆ ಬಂದು ಸೇರಲಿವೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೆಂಪೇಗೌಡ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಕ್ಕೂ ಮುನ್ನ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ, ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ವಿಧಾನಸೌಧ ಮುಂಭಾಗದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿದ್ದಾರೆ.

ಬಿಬಿಎಂಪಿ ಮಟ್ಟದ ಕಾರ್ಯಕ್ರಮವನ್ನು ಕೇಂದ್ರ ಕಚೇರಿಯ ಆವರಣದಲ್ಲಿರುವ ಡಾ. ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಆಚರಿಸಲಾಗುತ್ತದೆ. ವಿವಿಧ ಕ್ಷೇತ್ರದಲ್ಲಿ ಸಾಧಕರು ಹಾಗೂ  ಉತ್ತಮ ಅಧಿಕಾರಿ/ನೌಕಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ಸಂಜೆ ಪ್ರದಾನ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ನವೀನ್ ಕುಮಾರ್ ರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪುರಜ್ಯೋತಿ’ಗೆ ಸಚಿವರಿಂದ ಚಾಲನೆ

ಲಾಲ್‌ಬಾಗ್ ಗಡಿಗೋಪುರ: ದಿನೇಶ್ ಗುಂಡೂರಾವ್ ಮೇಖ್ರಿ ವೃತ್ತ ಗಡಿಗೋಪುರ: ಬಿ.ಎಸ್‌. ಸುರೇಶ್ ಕೆಂಪಾಂಬುಧಿ ಕೆರೆ ಗಡಿಗೋಪುರ: ಜಮೀರ್ ಅಹ್ಮದ್ ಖಾನ್ ಹಲಸೂರು ಗಡಿಗೋಪುರ: ಕೆ.ಜೆ ಜಾರ್ಜ್ ನಾಡಪ್ರಭು ಕೆಂಪೇಗೌಡರ ಸಮಾಧಿ ಮಾಗಡಿ: ರಾಮಲಿಂಗಾರೆಡ್ಡಿ ಚೆನ್ನಕೇಶವ ದೇವಾಲಯ ಆವತಿ: ಕೆ.ಎಚ್ ಮುನಿಯಪ್ಪ ಬಯಲು ಬಿಸಿಲು ಬಸವಣ್ಣ ಹುತ್ರಿದುರ್ಗ: ಜಿ ಪರಮೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.