ADVERTISEMENT

ಕವಿತೆ ಅನ್ಯಾಯಕ್ಕೊಳಗಾದವರ ಧ್ವನಿಯಾಗಲಿ

ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷ ಮಾಧವ್ ಕೌಶಿಕ್ ಆಶಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 22:12 IST
Last Updated 28 ಡಿಸೆಂಬರ್ 2019, 22:12 IST
ಕಾರ್ಯಕ್ರಮದಲ್ಲಿ ಮಾಧವ ಕೌಶಿಕ್‌ (ಎಡದಿಂದ ಮೂರನೆಯವರು) ಮತ್ತು ಸಿರ್ಪಿ ಬಾಲಸುಬ್ರಮಣ್ಯಂ ಚರ್ಚಿಸಿದರು. ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ. ಶ್ರೀನಿವಾಸ್ ರಾವ್ ಹಾಗೂ ಕನ್ನಡ ಸಲಹಾ ಮಂಡಳಿ ಸಂಚಾಲಕ ಸಿದ್ದಲಿಂಗಯ್ಯ ಇದ್ದರು -    ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಮಾಧವ ಕೌಶಿಕ್‌ (ಎಡದಿಂದ ಮೂರನೆಯವರು) ಮತ್ತು ಸಿರ್ಪಿ ಬಾಲಸುಬ್ರಮಣ್ಯಂ ಚರ್ಚಿಸಿದರು. ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ. ಶ್ರೀನಿವಾಸ್ ರಾವ್ ಹಾಗೂ ಕನ್ನಡ ಸಲಹಾ ಮಂಡಳಿ ಸಂಚಾಲಕ ಸಿದ್ದಲಿಂಗಯ್ಯ ಇದ್ದರು -    ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕವಿತೆಗಳುಮನದ ಕತ್ತಲನ್ನು ಕಳೆಯುವ ಜತೆಗೆ ಸಮಾಜದಲ್ಲಿ ಅನ್ಯಾಯಕ್ಕೊಳಗಾದವರಿಗೆ ಧ್ವನಿಯಾಗಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷ ಮಾಧವ್ ಕೌಶಿಕ್ ಆಶಯ ವ್ಯಕ್ತಪಡಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿಯು ಜೈನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಈಶಾನ್ಯ ಹಾಗೂ ದಕ್ಷಿಣ ಭಾರತೀಯ ಕಾವ್ಯೋತ್ಸವ’ದಲ್ಲಿ ಅವರು ಮಾತನಾಡಿದರು.

‘ಕವಿಗಳುಸಂಘ- ಸಂಸ್ಥೆ, ಪಕ್ಷಗಳೊಂದಿಗೆ ಗುರುತಿಸಿಕೊಳ್ಳದೇ ಸ್ವತಂತ್ರರಾಗಿರಬೇಕು. ಸತ್ಯಾಂಶ ತಿಳಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಸಾಮಾನ್ಯ ವ್ಯಕ್ತಿಗಳ ಸಂವಹನಕಾರನಾಗಿರುವ ಕವಿ, ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಮತ್ತು ಅಸಮಾನತೆಯನ್ನು ಕವಿತೆಗಳ ಮೂಲಕವೇ ಪ್ರತಿಭಟಿಸಬೇಕು’ ಎಂದರು.

ADVERTISEMENT

‘ಯೋಧರು ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ಶತ್ರುಗಳ ವಿರುದ್ಧ ಯುದ್ಧ ಮಾಡಿದರೆ, ಕವಿಗಳಿಗೆ ಲೇಖನಿ ಹಿಡಿದು ಹೋರಾಡುವ ಶಕ್ತಿಯಿದೆ. ಕವಿಯಿಂದ ಅಮೃತ ಹಾಗೂ ವಿಷ ಎರಡನ್ನೂ ಉಣಿಸಲು ಸಾಧ್ಯ. ಆದ್ದರಿಂದ ಸಮಾಜಕ್ಕೆ ಕನ್ನಡಿ ಹಿಡಿಯುವ ಕವಿಗಳು ಜಾಗತಿಕ ವಿದ್ಯಮಾನ ಹಾಗೂ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರೇರಣೆಯಾಗುವಂತಹ ಕವನ ರಚನೆ ಮಾಡಬೇಕು’ ಎಂದು ಹೇಳಿದರು.

ಸಾಹಿತ್ಯ ಅಕಾಡೆಮಿಯ ತಮಿಳು ಸಲಹಾ ಮಂಡಳಿಯ ಸಂಚಾಲಕ ಸಿರ್ಪಿಬಾಲಸುಬ್ರಹ್ಮಣ್ಯಂ, ‘ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿರುವ ನಮ್ಮ ದೇಶದಲ್ಲಿ ಪ್ರಾದೇಶಿಕ ವೈವಿಧ್ಯತೆ ಕಂಡು ಬಂದರೂ ಸಾಹಿತ್ಯದಲ್ಲಿ ಸಮಾನತೆ ಕಾಣಬಹುದು. ನಮ್ಮ ಬದುಕಿನ ವಿಧಾನವನ್ನು ಚಿತ್ರಿಸುವ ಮುದ್ರೆಯೇ ಕವಿತೆ.ಕವಿಗಳು ತಮ್ಮ ಕವಿತೆಯಲ್ಲಿ ತಾವು ಬೆಳೆದು ಬಂದ ಪರಿಸರವನ್ನೂ ಚಿತ್ರಿಸುತ್ತಾ ಬಂದಿದ್ದಾರೆ. ಇದರಿಂದಾಗಿ ಭಾರತೀಯ ಸಾಹಿತ್ಯದಲ್ಲಿ ಹೊಸತನವನ್ನು ಕಾಣಬಹುದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.