ADVERTISEMENT

‘ಮೂಲಸೌಕರ್ಯಗಳೂ ಉಳ್ಳವರ ಸ್ವತ್ತು’

​ಪ್ರಜಾವಾಣಿ ವಾರ್ತೆ
Published 30 ಮೇ 2019, 20:33 IST
Last Updated 30 ಮೇ 2019, 20:33 IST
ವಿಚಾರ ಸಂಕಿರಣದಲ್ಲಿ ಬಂಜಗೆರೆ ಜಯಪ್ರಕಾಶ್, ಶಾಸಕ ಎಸ್.ಟಿ.ಸೋಮಶೇಖರ್, ಪ್ರಾಧ್ಯಾಪಕರಾದ ಟಿ.ಎಚ್.ಮೂರ್ತಿ, ಸಂಜೀವ್ ರಾಜ್, ನರಸಿಂಹಮೂರ್ತಿ ಇದ್ದರು
ವಿಚಾರ ಸಂಕಿರಣದಲ್ಲಿ ಬಂಜಗೆರೆ ಜಯಪ್ರಕಾಶ್, ಶಾಸಕ ಎಸ್.ಟಿ.ಸೋಮಶೇಖರ್, ಪ್ರಾಧ್ಯಾಪಕರಾದ ಟಿ.ಎಚ್.ಮೂರ್ತಿ, ಸಂಜೀವ್ ರಾಜ್, ನರಸಿಂಹಮೂರ್ತಿ ಇದ್ದರು   

ಬೆಂಗಳೂರು: ‘ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ತೋರಿದರೆ ಕೊಳಗೇರಿ ಜನರ ಸಮಸ್ಯೆಗಳಿಗೆ ಅಲ್ಪಾವಧಿಯಲ್ಲೇ ಪರಿಹಾರ ಸಿಗಲಿದೆ’ ಎಂದು ಲೇಖಕ ಬಂಜೆಗೆರೆ ಜಯಪ್ರಕಾಶ್ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ಸಾವಿತ್ರಿ ಬಾ ಫುಲೆ ಮಹಿಳಾ ಸಂಘಟನೆ, ತಳ ಸಮುದಾಯಗಳ ಅಧ್ಯಯನ ಕೇಂದ್ರ, ರಾಷ್ಟ್ರೀಯ ಕಾನೂನು ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಕೊಳಗೇರಿ ಜನರ ಕುರಿತ ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಲೆಗಳ ಪ್ರದರ್ಶನ’ದಲ್ಲಿ ಅವರು ಮಾತನಾಡಿದರು.

‘ಮೂಲಸೌಕರ್ಯಗಳ ನಿರ್ವಹಣೆ ಮಾಡುವವರು ಕೊಳಗೇರಿ ನಿವಾಸಿಗಳು. ಈ ವರ್ಗದ ಜನತೆಯೇ ನೀರು, ಶೌಚಾಲಯ, ವಸತಿಗಾಗಿ ಪ್ರತಿನಿತ್ಯ ಪರಿತಪಿಸುವಂತಾಗಿದೆ. ಮೂಲಸೌಲಭ್ಯಗಳೂ ಆರ್ಥಿಕ ಬಲಾಢ್ಯರ ಸ್ವತ್ತಾಗಿರುವುದು ದುರ್ದೈವ’ ಎಂದರು.

ADVERTISEMENT

‘ಸರ್ಕಾರಿ ಅಂಕಿ ಅಂಶಗಳೇ ಶೇ.30ಕ್ಕೂ ಹೆಚ್ಚು ಜನ ಕೊಳಗೇರಿಗಳಲ್ಲಿ ವಾಸವಾಗಿರುವುದಾಗಿ ತಿಳಿಸಿವೆ. ಅವರನ್ನು ಕಡೆಗಣಿಸಿದರೆ ದೇಶದ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೂ ವ್ಯತಿರಿಕ್ತ ಪರಿಣಾಮಗಳು ಆಗಲಿವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಸುಮಾರು 5,200ಕ್ಕೂ ಹೆಚ್ಚು ಕೊಳಗೇರಿಗಳಿವೆ. ಅವುಗಳಲ್ಲಿ 2.5 ಕೋಟಿಗೂ ಹೆಚ್ಚು ಮಂದಿ ವಾಸವಾಗಿದ್ದಾರೆ.ಇವರಿಗೆ ನಾಗರಿಕ ಸೌಲಭ್ಯ ಹಂಚಿಕೆಯಲ್ಲೂ ಪ್ರಭುತ್ವ ಅಸ್ಪೃಶ್ಯರನ್ನಾಗಿಸಿದೆ’ ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ನರಸಿಂಹಮೂರ್ತಿ ಕಿಡಿಕಾರಿದರು.

‘ಶಿಕ್ಷಣದಿಂದ ಸಾಮಾಜಿಕ ಸ್ಥಿತಿ ಬದಲಾಯಿಸಿಕೊಳ್ಳಬಹುದು. ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು’ ಎಂದು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಸಮತಾ.ಬಿ.ದೇಶಮಾನೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.