ADVERTISEMENT

ಮೈಸೂರು ರಸ್ತೆ–ಕೆಂಗೇರಿ ಮೆಟ್ರೊ: ಹೊಸ ತಂತ್ರಾಂಶ ಬಳಕೆಗೆ ಹರಸಾಹಸ

ಮೊದಲ ದಿನ ಬೆರಳೆಣಿಕೆಯಷ್ಟು ಜನರ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 16:34 IST
Last Updated 30 ಆಗಸ್ಟ್ 2021, 16:34 IST
ಮೈಸೂರು ರಸ್ತೆ–ಕೆಂಗೇರಿ ವಿಸ್ತರಿತ ಮಾರ್ಗದಲ್ಲಿ ಮೆಟ್ರೊ ರೈಲಿನ ವಾಣಿಜ್ಯ ಸಂಚಾರ ಸೋಮವಾರದಿಂದ ಆರಂಭವಾಗಿದ್ದು, ರೈಲಿನಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಇದ್ದರು. ಪ್ರಜಾವಾಣಿ ಚಿತ್ರ : ಅನೂಪ್ ರಾಘ್.ಟಿ.
ಮೈಸೂರು ರಸ್ತೆ–ಕೆಂಗೇರಿ ವಿಸ್ತರಿತ ಮಾರ್ಗದಲ್ಲಿ ಮೆಟ್ರೊ ರೈಲಿನ ವಾಣಿಜ್ಯ ಸಂಚಾರ ಸೋಮವಾರದಿಂದ ಆರಂಭವಾಗಿದ್ದು, ರೈಲಿನಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಇದ್ದರು. ಪ್ರಜಾವಾಣಿ ಚಿತ್ರ : ಅನೂಪ್ ರಾಘ್.ಟಿ.   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಮೈಸೂರು ರಸ್ತೆ– ಕೆಂಗೇರಿ ವಿಸ್ತರಿತ ಮಾರ್ಗದಲ್ಲಿ ಸೋಮವಾರದಿಂದ ಮೆಟ್ರೊ ರೈಲು ಸೇವೆ ಆರಂಭವಾಯಿತು.ಮೆಟ್ರೊ ರೈಲು ಸೌಲಭ್ಯ ದೊರೆಯುತ್ತಿರುವುದು ಎಲ್ಲರ ಮೊಗದಲ್ಲಿ ಸಂತಸಕ್ಕೆ ಕಾರಣವಾಗಿತ್ತು. ಆದರೆ, ಮೊದಲ ದಿನ ಪ್ರತಿ ರೈಲಿನಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಕಂಡು ಬಂದರು.

ಈ ಮಾರ್ಗದಲ್ಲಿ ಮೆಟ್ರೊ ಸೇವೆ ಆರಂಭವಾಗಿರುವುದರ ಬಗ್ಗೆ ಬಹುತೇಕರಿಗೆ ಇನ್ನೂ ಮಾಹಿತಿ ಇರದಿರುವುದು ಮತ್ತು ಬಸ್‌ಗಳಲ್ಲಿ ಮಾಸಿಕ ಪಾಸ್‌ ಅವಧಿ ಇನ್ನೂ ಮುಗಿಯದಿರುವ ಕಾರಣದಿಂದಲೂ ಹೆಚ್ಚು ಪ್ರಯಾಣಿಕರು ಕಂಡು ಬರಲಿಲ್ಲ.

‘ಕೆಂಗೇರಿಯವರೆಗೆ ಮೆಟ್ರೊ ಸಂಚಾರ ಆರಂಭವಾಗಿರುವುದು ಸಂತಸ ತಂದಿದೆ. ಆದರೆ, ಈಗಾಗಲೇ ನಾನು ಬಿಎಂಟಿಸಿ ಬಸ್‌ ಮಾಸಿಕ ಪಾಸ್‌ ತೆಗೆದುಕೊಂಡಿರುವುದರಿಂದ 31ರವರೆಗೆ ಬಸ್‌ನಲ್ಲಿಯೇ ಪ್ರಯಾಣಿಸಿ, ಸೆ.1ರಿಂದ ಮೆಟ್ರೊ ರೈಲು ಸೇವೆ ಬಳಸಲು ನಿರ್ಧರಿಸಿದ್ದೇನೆ’ ಎಂದು ಕೆಂಗೇರಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ರಮೇಶ್‌ ಹೇಳಿದರು.

ADVERTISEMENT

ಆಟೊ, ಕ್ಯಾಬ್‌ಗಳಿಗೆ ನೂರಾರು ರೂಪಾಯಿ ಸುರಿಯುವುದು ತಪ್ಪಿದೆ. ಅಲ್ಲದೆ, ಸಂಚಾರ ದಟ್ಟಣೆಯ ಕಿರಿಕಿರಿಯೂ ತಪ್ಪಿದ್ದು, ಮೆಟ್ರೊ ರೈಲಿನಲ್ಲಿ ಸಂಚರಿಸುವುದು ಖುಷಿ ಕೊಡುತ್ತಿದೆ ಎಂದು ಬಹುತೇಕರು ಸಂತಸ ಹಂಚಿಕೊಂಡರು.

ಹೊಸ ತಂತ್ರಾಂಶ:

ನೂತನವಾಗಿ ಕಾರ್ಯಾರಂಭ ಮಾಡಿರುವ ಮೆಟ್ರೊ ನಿಲ್ದಾಣಗಳಲ್ಲಿ ಹೊಸ ತಂತ್ರಜ್ಞಾನ ಆಧರಿತ ಸ್ವಯಂಚಾಲಿತ ಶುಲ್ಕ ಸಂಗ್ರಹ (ಎಎಫ್‌ಸಿ) ದ್ವಾರಗಳನ್ನು ಅಳವಡಿಸಲಾಗಿದೆ. ಕ್ಯೂಆರ್‌ ಕೋಡ್‌ ಮತ್ತು ಬಾರ್‌ ಕೋಡ್‌ ಸ್ಕ್ಯಾನ್ ಮಾಡಿಯೂ ಪ್ರಯಾಣಿಸಬಹುದಾದ ವ್ಯವಸ್ಥೆಯನ್ನು ಇವುಗಳನ್ನು ಅಳವಡಿಸಲಾಗುತ್ತಿದೆ.

ಹಳೆಯ ನಿಲ್ದಾಣಗಳಲ್ಲಿನ ಎಎಫ್‌ಸಿ ದ್ವಾರಗಳಲ್ಲಿ ಇನ್ನೂ ಈ ವ್ಯವಸ್ಥೆ ಅಳವಡಿಸಿಲ್ಲ. ಹೀಗಾಗಿ, ಹೊಸ ನಿಲ್ದಾಣಗಳಲ್ಲಿ ನೂತನ ತಂತ್ರಜ್ಞಾನದ ವ್ಯವಸ್ಥೆ ಇದ್ದರೂ, ಅದರ ಬಳಕೆ ಇನ್ನೂ ಪ್ರಾರಂಭವಾಗಿಲ್ಲ. ಆದರೆ, ಹೊಸ ತಂತ್ರಾಂಶ ಬಳಕೆಯ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡದ ಕಾರಣ, ಒಂದು ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡುವುದಕ್ಕೆ 15ರಿಂದ 20 ನಿಮಿಷ ಕಾಯಬೇಕಾದ ಸ್ಥಿತಿ ಇದೆ.

‘ಮೊದಲು ಖಾಲಿಂದಿ (Khalindi) ಕಂಪನಿಗೆ ಈ ತಂತ್ರಾಂಶ ಬಳಕೆ ಮತ್ತು ನಿರ್ವಹಣೆಯ ಗುತ್ತಿಗೆ ನೀಡಲಾಗಿತ್ತು. ಈಗ, ಏಜಿಸ್‌ (AEGIS) ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಈ ಕಂಪನಿಯು ಸ್ಯಾಮ್‌ಸಂಗ್‌ ತಂತ್ರಾಂಶವನ್ನು ಅಳವಡಿಸಿಕೊಂಡಿದೆ. ಈ ತಂತ್ರಾಂಶದ ಬಳಕೆಯ ಬಗ್ಗೆ ನಮಗೆ ಒಂದು ದಿನವೂ ತರಬೇತಿ ನೀಡಿಲ್ಲ. ಬಳಕೆಯ ವಿಧಾನ ಸರಿಯಾಗಿ ಗೊತ್ತಿಲ್ಲದ ಕಾರಣ ವಿಳಂಬವಾಗುತ್ತಿದೆ’ ಎಂದು ಮೆಟ್ರೊ ನಿಲ್ದಾಣದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ‘ಗೆ ಹೇಳಿದರು.

‘ಶುಲ್ಕ ಸಂಗ್ರಹದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನಾವೇ ಕೈಯಿಂದ ಹಣ ಹಾಕಬೇಕಾಗುತ್ತದೆ. ಹೆಚ್ಚು ಎಚ್ಚರ ವಹಿಸಬೇಕಾಗಿರುವುದರಿಂದಲೂ ವಿಳಂಬವಾಗುತ್ತಿದೆ’ ಎಂದು ಮತ್ತೊಂದು ನಿಲ್ದಾಣದ ಸಿಬ್ಬಂದಿ ಹೇಳಿದರು.

‘ಹೊಸ ತಂತ್ರಾಂಶ ಬಳಸುವಾಗ ಪ್ರಾರಂಭದಲ್ಲಿ ನಿಧಾನವಾಗುವುದ ಸಹಜ. ಮೊಬೈಲ್‌ನಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿಯೂ ಟಿಕೆಟ್‌ ಖರೀದಿಸಬಹುದು. ಅಲ್ಲದೆ, ಟೋಕನ್‌ ಬದಲು ಬಾರ್‌ಕೋಡ್‌ ಸಹಾಯದಿಂದಲೂ ಹಣ ಪಾವತಿಸಿ ಪ್ರಯಾಣಿಸಬಹುದಾಗಿದೆ. ಈ ಎಲ್ಲ ಸೌಲಭ್ಯ ಅಳವಡಿಕೆಯು ಈಗಷ್ಟೇ ಆರಂಭವಾಗಿರುವುದರಿಂದ ಸ್ಮಾರ್ಟ್‌ ಕಾರ್ಡ್‌ ರಿಚಾರ್ಜ್‌, ಮತ್ತಿತರ ಕೆಲಸ ನಿಧಾನವಾಗುತ್ತಿದೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಸಾರ್ವಜನಿಕರು ಏನಂತಾರೆ?

ಹಣ, ಸಮಯ ಉಳಿತಾಯ

ನಾನು ಅತ್ತಿಗುಪ್ಪೆಯಿಂದ ಕೆಂಗೇರಿಯವರೆಗೆ ಪ್ರಯಾಣಿಸುತ್ತೇನೆ. ಮೊದಲು ಆಟೊಗೆ ₹160, ಕ್ಯಾಬ್‌ಗೆ ₹240 ಕೊಡಬೇಕಾಗಿತ್ತು. ಮೆಟ್ರೊ ಸೇವೆ ಆರಂಭವಾದ ನಂತರ ಕೇವಲ ₹28ರಲ್ಲಿಯೇ ಕೆಂಗೇರಿ ಬರುತ್ತೇನೆ. ಹಣ, ಸಮಯ ಉಳಿಯುತ್ತದೆ. ಪ್ರಯಾಣವೂ ಕಷ್ಟ ಎನಿಸುತ್ತಿಲ್ಲ

-ಸುಷ್ಮಾ, ಅತ್ತಿಗುಪ್ಪೆ

ಉತ್ತಮ ಸಂಪರ್ಕ ವ್ಯವಸ್ಥೆ

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜರಾಜೇಶ್ವರಿ ನಗರದಿಂದ ಕೆಂಗೇರಿಗೆ ಪ್ರಯಾಣಿಸುತ್ತಿದ್ದೆ. ಮೆಟ್ರೊ ರೈಲು ಸೇವೆ ಆರಂಭವಾಗಿರುವುದರಿಂದ ಸಂಪರ್ಕ ವ್ಯವಸ್ಥೆ ಸಾಕಷ್ಟು ಸುಧಾರಿಸಿದಂತಾಗಿದೆ. ಆಸ್ಪತ್ರೆ–ಕಾಲೇಜುಗಳ ಅಭಿವೃದ್ಧಿಗೂ ನೆರವಾಗಲಿದೆ.

-ಡಾ. ಅಕ್ಷತಾ, ರಾಜರಾಜೇಶ್ವರಿ ನಗರ

ಅಚ್ಚುಕಟ್ಟಾದ ವ್ಯವಸ್ಥೆ

ನೂತನ ನಿಲ್ದಾಣಗಳಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಲಿಫ್ಟ್‌, ಎಸ್ಕಲೇಟರ್‌ ಸೌಲಭ್ಯ ಒದಗಿಸಲಾಗಿದೆ. ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡುವುದು ಸ್ವಲ್ಪ ವಿಳಂಬವಾಗುತ್ತಿದೆ. ಆದರೆ, ಹತ್ತು ನಿಮಿಷದೊಳಗೇ ರೈಲುಗಳ ಬರುತ್ತಿವೆ. ದೀಪಾಂಜಲಿ ನಗರದಿಂದ ಏಳೆಂಟು ನಿಮಿಷಗಳಲ್ಲಿಯೇ ಕೆಂಗೇರಿ ತಲುಪಬಹುದು.

-ಅಜಿತ್ ಶೆಟ್ಟಿ, ಕುಂಬಳಗೋಡು

ಪ್ರಯಾಣದ ಭಯವಿಲ್ಲ

ನಾನು ಇಂದಿರಾನಗರದಲ್ಲಿ ಕೆಲಸ ಮಾಡುತ್ತಿದ್ದೇನೆ. ಉಳಿದುಕೊಂಡಿರುವುದು ಕೆಂಗೇರಿಯಲ್ಲಿ. ಬಸ್‌, ಆಟೊ ಅಥವಾ ಕ್ಯಾಬ್‌ನಲ್ಲಿ ಸಂಚರಿಸುವಾಗ ಕೆಲವೊಮ್ಮೆ ಆತಂಕ ಮತ್ತು ಭಯವಿತ್ತು. ಈಗ ಮೆಟ್ರೊ ರೈಲಿನಲ್ಲಿ ಯಾವುದೇ ಆತಂಕವಿಲ್ಲದೆ ಪ್ರಯಾಣಿಸಬಹುದಾಗಿದೆ.

-ನಿಶಿತಾ, ಕೆಂಗೇರಿ ಉಪನಗರ

ಸುರಕ್ಷಿತ ಪ್ರಯಾಣ

ಮೆಟ್ರೊ ರೈಲು ಸೇವೆಯಿಂದ ಹಣ ಮತ್ತು ಸಮಯ ಎರಡೂ ಉಳಿತಾಯವಾಗುತ್ತಿದೆ. ಪ್ರಯಾಣವೂ ಸುರಕ್ಷಿತವಾಗಿದೆ. ಈಗ ರಾತ್ರಿ 8 ಗಂಟೆಯವರೆಗೆ ಮಾತ್ರ ಸೇವೆ ಒದಗಿಸಲಾಗುತ್ತಿದೆ. ರಾತ್ರಿ 10ಗಂಟೆಯವರೆಗೆ ಸಮಯ ವಿಸ್ತರಿಸಿದರೆ ಅನುಕೂಲವಾಗುತ್ತದೆ.

-ಜೆಸ್ಲಿನ್, ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.