ADVERTISEMENT

ಕೆಂಗೇರಿ ಉಪನಗರ–ಉಲ್ಲಾಳು ಸಂಚಾರ ದುಸ್ತರ

ಕಾವೇರಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ತಂದೊಡ್ಡಿದ ಸಮಸ್ಯೆ- ವಾಹನ ಸವಾರರ ಪರದಾಟ

ವಿಜಯಕುಮಾರ್ ಎಸ್.ಕೆ.
Published 23 ಅಕ್ಟೋಬರ್ 2021, 3:53 IST
Last Updated 23 ಅಕ್ಟೋಬರ್ 2021, 3:53 IST
ಸೊಣ್ಣೇನಹಳ್ಳಿ ಜಂಕ್ಷನ್‌ನಲ್ಲಿ ಕೆಸರುಗದ್ದೆಯಾಗಿರುವ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿರುವುದು (ಎಡ ಚಿತ್ರ) ಉಲ್ಲಾಳು ಬಳಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ            –ಪ್ರಜಾವಾಣಿ ಚಿತ್ರಗಳು/ಅನೂಪ್ ರಾಘ ಟಿ.
ಸೊಣ್ಣೇನಹಳ್ಳಿ ಜಂಕ್ಷನ್‌ನಲ್ಲಿ ಕೆಸರುಗದ್ದೆಯಾಗಿರುವ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿರುವುದು (ಎಡ ಚಿತ್ರ) ಉಲ್ಲಾಳು ಬಳಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ –ಪ್ರಜಾವಾಣಿ ಚಿತ್ರಗಳು/ಅನೂಪ್ ರಾಘ ಟಿ.   

ಬೆಂಗಳೂರು: ಒಂದು ಬದಿಯಲ್ಲಿ ಪೈಪ್‌ಲೈನ್ ಕಾಮಗಾರಿ, ಇನ್ನೊಂದು ಬದಿಯಲ್ಲಿ ಗುಂಡಿಮಯ ರಸ್ತೆ, ಮಂಡಿ ಎತ್ತರದ ಗುಂಡಿಗಳಲ್ಲಿ ಬಿದ್ದು– ಎದ್ದು ಪ್ರಯಾಣಿಸುವ ವಾಹನ ಸವಾರರು...

ಕೆಂಗೇರಿ ಉಪನಗರದಿಂದ ಉಲ್ಲಾಳು, ಉಲ್ಲಾಳು ಉಪನಗರ ಮಾರ್ಗಗಳಲ್ಲಿ ಮುದ್ದಯ್ಯನಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ 100 ಅಡಿ ರಸ್ತೆಯ ದುಸ್ಥಿತಿ ಇದು.

ಕಾವೇರಿ ಕುಡಿಯುವ ನೀರು ಸರಬರಾಜು 4ನೇ ಹಂತದ ಯೋಜನೆಯಡಿ ನೈಸ್ ರಸ್ತೆ ಜಂಕ್ಷನ್ ಸಮೀಪದ ಹೊಸ ಬೈರೋಹಳ್ಳಿ ಬಳಿ ನಿರ್ಮಾಣ ಆಗಲಿರುವ 25 ಲಕ್ಷ ಲೀಟರ್ ಸಾಮರ್ಥ್ಯದ ಜಲಸಂಗ್ರಹ ಕೇಂದ್ರದಿಂದ ಯಲಹಂಕ ತನಕ 65 ಕಿಲೋ ಮೀಟರ್‌ ಉದ್ದದ ಪೈಪ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ.

ADVERTISEMENT

ಕೊಮ್ಮಘಟ್ಟ ರಸ್ತೆಯ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಿಂದ ಮುದ್ದಯ್ಯನಪಾಳ್ಯ ತನಕದ 6 ಕಿಲೋ ಮೀಟರ್‌ ಉದ್ದದ ನಾಲ್ಕು ಪಥಗಳ ರಸ್ತೆಯಲ್ಲಿ ಒಂದು ಬದಿಯಲ್ಲಿ ಪೈಪ್‌ ಅಳವಡಿಕೆ ಮಾಡಲಾಗುತ್ತಿದೆ. ಈ ಕಾಮಗಾರಿಗಾಗಿ ಒಂದು ಭಾಗದ ರಸ್ತೆಯನ್ನು ಬಂದ್ ಮಾಡಿ ವರ್ಷವೇ ಕಳೆದಿದೆ. ಪೈಪ್‌ ಅಳವಡಿಕೆ ಕಾಮಗಾರಿ ಹಲವೆಡೆ ಮುಗಿದಿದ್ದು, ಕೆಲವೆಡೆ ಇನ್ನೂ ಬಾಕಿ ಇದೆ.

ಮಾರುತಿನಗರ ಮತ್ತು ಸೊಣ್ಣೇನಹಳ್ಳಿ ವೃತ್ತದಲ್ಲಿ ವಾಹನ ಸಂಚಾರವೇ ದುಸ್ತರವಾಗಿದೆ. ಒಂದು ಬದಿಯಲ್ಲಿ ಕಾಮಗಾರಿಗೆ ಬಂದ್ ಮಾಡಿದ್ದರೆ, ಇನ್ನೊಂದು ಬದಿಯಲ್ಲಿ ಹೊಂಡ ಬಿದ್ದಿದೆ. ಕೆಸರುಗದ್ದೆಯಂತಾಗಿರುವ ರಸ್ತೆಯಲ್ಲೇ ವಾಹನಗಳು ಸಂಚರಿಸಬೇಕಿದೆ.

ಈ ವೃತ್ತವನ್ನು ಹಾದು ಹೋಗುವುದು ವಾಹನ ಸವಾರರಿಗೆ ಸವಾಲಿನ ಕೆಲಸ. ಅದರಲ್ಲೂ ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದು. ಮಳೆಯಲ್ಲಿ ರಸ್ತೆಯಲ್ಲೇ ನಿಲ್ಲುವ ನೀರಿನಲ್ಲಿ ಗುಂಡಿಗಳು ಕಾಣಿಸಿದರೆ ಅದರೊಳಗೆ ಬಿದ್ದು ಎದ್ದು ಹೋಗುವುದು ಸಾಮಾನ್ಯವಾಗಿದೆ. ಕೈಕಾಲು ಮುರಿದುಕೊಂಡು ಬೈಕ್ ಸವಾರರು ಆಸ್ಪತ್ರೆ ಸೇರುತ್ತಿದ್ದಾರೆ.

‘ಪೈಪ್‌ಲೈನ್ ಅಳವಡಿಕೆ ಪೂರ್ಣಗೊಂಡಿರುವ ಕಡೆಯೂ ಮಣ್ಣು ಮುಚ್ಚುವ ಕೆಲಸವನ್ನು ಸರಿಯಾಗಿ ಮಾಡಿಲ್ಲ. ಜೋರು ಮಳೆಯಲ್ಲಿ ಮುಚ್ಚಿರುವ ಮಣ್ಣು ಕೂಡ ಕೊಚ್ಚಿ ಹೋಗಿದೆ. ಈ ರೀತಿಯ ಮಂಡಿಯುದ್ದದ ಗುಂಡಿಗಳು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ’ ಎಂದು ಸ್ಥಳೀಯರು ಹೇಳುತ್ತಾರೆ.

‘ರಾತ್ರಿ ವೇಳೆಯಂತೂ ದಿನಕ್ಕೆ ಒಬ್ಬರಾದರೂ ಈ ರಸ್ತೆಯಲ್ಲಿ
ಬಿದ್ದು ಗಾಯಗೊಳ್ಳುತ್ತಿದ್ದಾರೆ. ರಸ್ತೆ ಇಷ್ಟೊಂದು ಹದಗೆಟ್ಟಿರುವುದನ್ನು ನೋಡಿದರೂ ಅಧಿಕಾರಿಗಳು ಮತ್ತು ರಾಜಕಾರಣಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.