ಕೆಂಗೇರಿ: ‘ಜಿಬಿಎ ವಾರ್ಡ್ ವಿಂಗಡಣಾ ಕರಡು ಅಧಿಸೂಚನೆಯಲ್ಲಿ ಕೈಬಿಟ್ಟಿರುವ ಕೆಂಗೇರಿ ಹೆಸರನ್ನು ಮರು ಸೇರ್ಪಡೆಗೊಳಿಸಬೇಕು’ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ರುದ್ರೇಶ್ ಒತ್ತಾಯಿಸಿದರು.
‘ನಗರದ ಗ್ರಾಮಾಂತರ ಜನರ ಪಾಲಿಗೆ ಕೇಂದ್ರ ಸ್ಥಾನದಂತಿದ್ದ ಕೆಂಗೇರಿಗೆ ಶತಮಾನಗಳ ಇತಿಹಾಸವಿದೆ. ಮೈಸೂರು ಅರಸರು ಭೇಟಿ ನೀಡುತ್ತಿದ್ದ ಬಂಡೇಮಠ, ಗಾಂಧೀಜಿ ಉದ್ಘಾಟಿಸಿದ್ದ ಬಾವಿ, ಕೆಂಗಲ್ ಹನುಮಂತಯ್ಯ ಓದಿದ ಶಾಲೆ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸಿ.ವಿ.ರಾಮನ್ ಅವರ ತೋಟ ಇಲ್ಲಿದೆ. ಇತಿಹಾಸ ಹೊಂದಿರುವ ಕೆಂಗೇರಿ ಹಿರಿಮೆಯನ್ನು ನಿರ್ನಾಮ ಮಾಡಲಾಗುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಅಲ್ಪಸಂಖ್ಯಾತರು ಹಾಗೂ ಬಿಜೆಪಿ ವಿರೋಧಿ ಮತಗಳನ್ನು ಸಮೀಕರಿಸಿ ನಮ್ಮ ಪಕ್ಷದವರು ಗೆಲ್ಲದ ರೀತಿಯಲಿ ವಾರ್ಡ್ ರಚನೆ ಮಾಡಲಾಗಿದೆ. ಹಿಂದುತ್ವವಾದಿಗಳನ್ನು ಹಣಿಯಲು, ಬಿಜೆಪಿ ಮತಗಳನ್ನು ಒಡೆಯಲು ಸರ್ಕಾರ ವಾಮ ಮಾರ್ಗ ಅನುಸರಿಸುತ್ತಿದೆ’ ಎಂದು ಆಪಾದಿಸಿದರು.
ಪಾಲಿಕೆ ಮಾಜಿ ಸದಸ್ಯ ರ.ಆಂಜಿನಪ್ಪ ಮಾತನಾಡಿ, ‘ಯಶವಂತಪುರ ಕ್ಷೇತ್ರದಲ್ಲಿ ಕೆಂಗೇರಿ ಹೋಬಳಿಯ ಶೇ 75ರಷ್ಟು ಮತದಾರರಿದ್ದಾರೆ. ಕೆಂಗೇರಿ ಹೋಬಳಿ ಭಾಗವಾಗಿರುವ ಮೈಲಸಂದ್ರ ಹೆಸರಿನಲ್ಲಿ ವಾರ್ಡ್ ರಚಿಸಿ ಕೆಂಗೇರಿಯನ್ನು ಅದರಲ್ಲಿ ವಿಲೀನಗೊಳಿಸಲಾಗಿದೆ’ ಎಂದು ತಿಳಿಸಿದರು.
ಪಾಲಿಕೆ ಮಾಜಿ ಸದಸ್ಯರಾದ ಸತ್ಯನಾರಾಯಣ್, ಜಿ.ಮುನಿರಾಜು, ನಾಗರಾಜ್, ಬಿಜೆಪಿ ಮುಖಂಡರಾದ ಮೈಲಸಂದ್ರದ ಮುನಿರಾಜು, ಅನಿಲ್ ಚಳಗೇರಿ, ಜೆ.ರಮೇಶ್, ಸುಧೀರ್, ನಾಗರಾಜ್, ಜಯರಾಂ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.