ADVERTISEMENT

ಚಿತ್ರಕಲಾ ಪರಿಷತ್ತಿನಲ್ಲಿ ‘ಕೈಮಗ್ಗ’ದ ಕಲರವ: ಸೆಳೆಯುತ್ತಿರುವ ಕರಕುಶಲ ವಸ್ತುಗಳು

ಗಮನ ಸೆಳೆಯುತ್ತಿವೆ ವೈವಿಧ್ಯಮಯ ಕರಕುಶಲ ವಸ್ತುಗಳು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 16:21 IST
Last Updated 7 ಅಕ್ಟೋಬರ್ 2021, 16:21 IST
‘ಪವಿತ್ರವಸ್ತ್ರ ಅಭಿಯಾನ’ದಲ್ಲಿ ಕೈಮಗ್ಗದ ಉತ್ಪನ್ನಗಳನ್ನು ಜನರು ವೀಕ್ಷಿಸಿದರು – ಪ್ರಜಾವಾಣಿ ಚಿತ್ರ 
‘ಪವಿತ್ರವಸ್ತ್ರ ಅಭಿಯಾನ’ದಲ್ಲಿ ಕೈಮಗ್ಗದ ಉತ್ಪನ್ನಗಳನ್ನು ಜನರು ವೀಕ್ಷಿಸಿದರು – ಪ್ರಜಾವಾಣಿ ಚಿತ್ರ    

ಬೆಂಗಳೂರು: ಇಲ್ಲಿನ ಚಿತ್ರಕಲಾ ಪರಿಷತ್ತಿನಲ್ಲಿ ಕೈಮಗ್ಗದಬಗೆಬಗೆಯ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳು ನಗರದ ಜನತೆಯನ್ನು ಸೆಳೆಯುತ್ತಿವೆ.

ಚರಕ, ದೇಸಿ, ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟ ಹಾಗೂ ಗ್ರಾಮ ಸೇವಾ ಸಂಘವು ಒಟ್ಟಾಗಿ ಹಮ್ಮಿಕೊಂಡಿರುವ ‘ಪವಿತ್ರವಸ್ತ್ರ ಅಭಿಯಾನ’ದ ಎರಡನೇ ದಿನವಾದ ಗುರುವಾರ ಕೂಡ ಮಕ್ಕಳು, ವೃದ್ಧರು ಸೇರಿದಂತೆ ವಿವಿಧ ವಯೋಮಾನದವರು ಭೇಟಿ ನೀಡಿ, ಕೈಮಗ್ಗದ ಉತ್ಪನ್ನಗಳನ್ನು ವೀಕ್ಷಿಸಿದರು.ಬಿದಿರಿನ ಬುಟ್ಟಿ, ಹತ್ತಿ ಬಟ್ಟೆಗಳು, ಕೈಮಗ್ಗದಿಂದ ನೇಯ್ದ ಸೀರೆಗಳು ಸೇರಿದಂತೆ ಹಲವು ಉತ್ಪನ್ನಗಳ ಖರೀದಿ ಜೋರಾಗಿತ್ತು.

ಕೈಮಗ್ಗದಿಂದ ನೇಯ್ದ ಖಾದಿ ಸೀರೆಗಳು, ಖಾದಿ ಜುಬ್ಬಾ, ಪೈಜಾಮ, ಲಂಗ-ದಾವಣಿ, ಜಮಖಾನಾ, ಮ್ಯಾಟ್ ಸೇರಿದಂತೆ ವಿವಿಧ ಉತ್ಪನ್ನಗಳು ಮಳಿಗೆಗಳಲ್ಲಿ ಕಾಣಸಿಗುತ್ತವೆ.₹ 100ನಿಂದ ₹ 10 ಸಾವಿರದ ವರೆಗಿನ ಕೈಮಗ್ಗದ ಉತ್ಪನ್ನಗಳು ಮಳಿಗೆಗಳಲ್ಲಿ ಇವೆ.

ADVERTISEMENT

ಚರ್ಮದ ಪಾದರಕ್ಷೆ, ಶೂ, ಬ್ಯಾಗುಗಳು, ಸೆಣಬಿನ ಚೀಲಗಳು, ಮಣ್ಣಿನ ಅಲಂಕಾರಿಕ ವಸ್ತುಗಳೂ ಇವೆ.ದೊಡ್ಡದಾದ ನೆಲ ಹಾಸುಗಳೂ (ಕಾರ್ಪೆಟ್) ಕಾಣಸಿಗುತ್ತವೆ. ವಿಜಯಪುರದ ಕೈದಿಗಳು ತಯಾರಿಸಿದ ಕೈಮಗ್ಗದ ಉತ್ಪನ್ನಗಳು ಪ್ರದರ್ಶನದಲ್ಲಿದ್ದು, ಗಮನಸೆಳೆಯುತ್ತಿವೆ.ಖಾದಿ ಮಳಿಗೆಗಳಲ್ಲಿ ಅಂಗಿ, ಜಾಕೆಟ್, ಪಂಚೆ ಮುಂತಾದ ಸಾಂಪ್ರದಾಯಿಕ ಉಡುಪುಗಳನ್ನು ನಗರದ ಮಂದಿ ಖರೀದಿಸಿ, ಸಂಭ್ರಮಿಸಿದರು.

ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಖಾದಿ ಉಡುಪುಗಳು ಒಂದೇ ಸೂರಿನಡಿ ಸಿಗುತ್ತಿರುವುದು ಅಭಿಯಾನದ ವಿಶೇಷ. ಇದೇ 10ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ಈ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಅ.8ಕ್ಕೆ ಚಿತ್ರಕಲಾ ಪ್ರದರ್ಶನ

‘ಪವಿತ್ರವಸ್ತ್ರ ಅಭಿಯಾನ’ದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ‘ಸರಳತೆಯ ಸೌಂದರ್ಯ’ ಶೀರ್ಷಿಕೆಯಡಿ ಶುಕ್ರವಾರ ಬೆಳಿಗ್ಗೆ 11ಕ್ಕೆ ಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಪ್ರಸನ್ನ ಹಾಗೂ ನಿರಂಜನ್ ಅವರು ರಚಿಸಿದ ಕಲಾಕೃತಿಗಳು ಪ್ರದರ್ಶನ ಕಾಣಲಿವೆ. ಕಲಾ ನಿರ್ದೇಶಕ ಎಂ.ಎಸ್. ಸತ್ಯು ಅವರು ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.