ವಿಧಾನಸೌಧ
ಬೆಂಗಳೂರು: ಸೂರ್ಯನಗರದ ನಾಲ್ಕನೇ ಹಂತದಲ್ಲಿ ನಾಲ್ಕು ಸಾವಿರ ನಿವೇಶನಗಳ ಅಭಿವೃದ್ಧಿಪಡಿಸಿರುವ ಕರ್ನಾಟಕ ಗೃಹ ಮಂಡಳಿಯು (ಕೆಎಚ್‌ಬಿ), ಮುಂದಿನ ತಿಂಗಳಲ್ಲಿ ಲಾಟರಿ ಮೂಲಕ ನಾಗರಿಕರಿಗೆ ಹಂಚಿಕೆ ಮಾಡಲು ತಯಾರಿ ನಡೆಸಿದೆ.
1200 ಎಕರೆ ಪ್ರದೇಶದಲ್ಲಿ ಮಂಡಳಿಯು ಬಡಾವಣೆ ಅಭಿವೃದ್ಧಿಪಡಿಸಿದ್ದು, 50:50ರ ಅನುಪಾತದಲ್ಲಿ ನಿವೇಶನಗಳು ಹಂಚಿಕೆಯಾಗಲಿವೆ. ಶೇ 50ರಷ್ಟು ನಿವೇಶನಗಳನ್ನು ಭೂಮಿ ನೀಡಿದ ರೈತರಿಗೆ ನೀಡಲಾಗುತ್ತದೆ. ಇನ್ನುಳಿದ 50ರಷ್ಟು ನಿವೇಶನಗಳನ್ನು ನಾಗರಿಕರಿಗೆ ಹಂಚಿಕೆ ಮಾಡಲಾಗುತ್ತದೆ.
ರೈತರ ಪಾಲಿನ ನಿವೇಶನಗಳು ಈಗಾಗಲೇ ಹಂಚಿಕೆಯಾಗಿವೆ. ನಾಗರಿಕರಿಗೆ ಮೀಸಲಾದ ನಿವೇಶನಗಳಿಗಾಗಿ ಒಟ್ಟು 17 ಸಾವಿರ ಅರ್ಜಿಗಳು ಬಂದಿದ್ದು, ನಾಲ್ಕು ಸಾವಿರ ಮಂದಿಗೆ ಅಷ್ಟೇ ನಿವೇಶನಗಳು ಲಭ್ಯವಾಗಲಿವೆ. ಶೇ 15ರಷ್ಟು ನಿವೇಶನಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ನಿವೇಶನಗಳ ಹಂಚಿಕೆಗೆ 2017–18ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಭೂಸ್ವಾಧೀನ, ಕಾನೂನು ತೊಡಕುಗಳು ಬಗೆಹರಿದ ಬಳಿಕ, ಅಂತಿಮವಾಗಿ ಈಗ ಬಡಾವಣೆ ಸಿದ್ಧವಾಗಿದೆ. 20X30, 30X40, 30X50, 40X60, 50X80 ಅಡಿ ಅಳತೆಯ ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದು, ಚದರ ಅಡಿಗೆ ₹2,200 ದರ ನಿಗದಿಪಡಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತದೆ. ಸೂರ್ಯನಗರ ನಾಲ್ಕನೇ ಹಂತದಲ್ಲಿ ಮಂಡಳಿಗೆ ಸೇರಿದ ಇನ್ನೂ 600 ಎಕರೆ ಜಾಗವಿದ್ದು, ಮುಂದಿನ ದಿನಗಳಲ್ಲಿ 3–4 ಸಾವಿರ ನಿವೇಶನಗಳು ಹಂಚಿಕೆಗೆ ಲಭ್ಯವಾಗಲಿವೆ. ಈಗ ಹಂಚಿಕೆಗೆ ಲಭ್ಯ ವಾಗಿರುವ ನಿವೇಶನಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ವಿವರಿಸಿದರು.
ಕೆಂಗೇರಿ, ಸೂರ್ಯನಗರದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ
ಬೇಡಿಕೆ ಆಧರಿಸಿ ವಿಲ್ಲಾಗಳ ನಿರ್ಮಾಣಕ್ಕೆ ಒತ್ತು
ಕೈಗೆಟುಕುವ ದರದಲ್ಲಿ ನಾಗರಿಕರಿಗೆ ನಿವೇಶನ
ವಿಲ್ಲಾಗಳ ನಿರ್ಮಾಣ
ಗೃಹ ಮಂಡಳಿಯು ಒಂದು ಸಾವಿರ ವಿಲ್ಲಾಗಳನ್ನು ನಿರ್ಮಿಸಲು ತೀರ್ಮಾನಿಸಿದೆ. ಮೊದಲ ಹಂತದಲ್ಲಿ ಸೂರ್ಯನಗರದಲ್ಲಿ 100 ವಿಲ್ಲಾಗಳನ್ನು ನಿರ್ಮಿಸಲಾಗುತ್ತದೆ. ಉಳಿದ ವಿಲ್ಲಾಗಳನ್ನು ಜನರಿಂದ ಬರುವ ಬೇಡಿಕೆ ಆಧರಿಸಿ ಹಂತ ಹಂತವಾಗಿ ನಿರ್ಮಿಸಲಾಗುತ್ತದೆ.
35X40, 35X50, 45X60 ಅಡಿ ಜಾಗದಲ್ಲಿ ವಿಲ್ಲಾಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇವುಗಳಿಗೆ ಕ್ರಮವಾಗಿ ₹99 ಲಕ್ಷ, ₹1.40 ಕೋಟಿ ಹಾಗೂ ₹1.85 ಕೋಟಿ ದರ ನಿಗದಿಪಡಿಸಲಾಗಿದೆ. ಈಗಾಗಲೇ 100ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ತಿಂಗಳ 31ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಇನ್ನಷ್ಟು ಅರ್ಜಿಗಳು ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಉದ್ಯಾನ, ಇ.ವಿ.ಚಾರ್ಜಿಂಗ್, ಮಳೆ ನೀರು ಸಂಗ್ರಹ, ಭದ್ರತಾ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ‘ಸೂರ್ಯನಗರ ನಿಸರ್ಗ ವ್ಯಾಲಿ ಟೌನ್‌ಶಿಪ್’ ಎಂದು ಇದಕ್ಕೆ ಹೆಸರಿಡಲಾಗಿದೆ.
ಮೈಸೂರು ರಸ್ತೆಯ ದೊಡ್ಡ ಆಲದ ಮರ ಬಳಿಯ ಚುಂಚನಕುಪ್ಪೆಯಲ್ಲಿ ಇದೇ ರೀತಿ ವಿಲ್ಲಾಗಳನ್ನು ನಿರ್ಮಿಸುವ ಉದ್ದೇಶವಿದೆ. ಜನರಿಂದ ಬರುವ ಬೇಡಿಕೆ ಆಧರಿಸಿ ಮಂಡಳಿಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.ಗೃಹ ಮಂಡಳಿಯು ಒಂದು ಸಾವಿರ ವಿಲ್ಲಾಗಳನ್ನು ನಿರ್ಮಿಸಲು ತೀರ್ಮಾನಿಸಿದೆ. ಮೊದಲ ಹಂತದಲ್ಲಿ ಸೂರ್ಯನಗರದಲ್ಲಿ 100 ವಿಲ್ಲಾಗಳನ್ನು ನಿರ್ಮಿಸಲಾಗುತ್ತದೆ. ಉಳಿದ ವಿಲ್ಲಾಗಳನ್ನು ಜನರಿಂದ ಬರುವ ಬೇಡಿಕೆ ಆಧರಿಸಿ ಹಂತ ಹಂತವಾಗಿ ನಿರ್ಮಿಸಲಾಗುತ್ತದೆ.
35X40, 35X50, 45X60 ಅಡಿ ಜಾಗದಲ್ಲಿ ವಿಲ್ಲಾಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇವುಗಳಿಗೆ ಕ್ರಮವಾಗಿ ₹99 ಲಕ್ಷ, ₹1.40 ಕೋಟಿ ಹಾಗೂ ₹1.85 ಕೋಟಿ ದರ ನಿಗದಿಪಡಿಸಲಾಗಿದೆ. ಈಗಾಗಲೇ 100ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ತಿಂಗಳ 31ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಇನ್ನಷ್ಟು ಅರ್ಜಿಗಳು ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಉದ್ಯಾನ, ಇ.ವಿ.ಚಾರ್ಜಿಂಗ್, ಮಳೆ ನೀರು ಸಂಗ್ರಹ, ಭದ್ರತಾ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ‘ಸೂರ್ಯನಗರ ನಿಸರ್ಗ ವ್ಯಾಲಿ ಟೌನ್‌ಶಿಪ್’ ಎಂದು ಇದಕ್ಕೆ ಹೆಸರಿಡಲಾಗಿದೆ.
ಮೈಸೂರು ರಸ್ತೆಯ ದೊಡ್ಡ ಆಲದ ಮರ ಬಳಿಯ ಚುಂಚನಕುಪ್ಪೆಯಲ್ಲಿ ಇದೇ ರೀತಿ ವಿಲ್ಲಾಗಳನ್ನು ನಿರ್ಮಿಸುವ ಉದ್ದೇಶವಿದೆ. ಜನರಿಂದ ಬರುವ ಬೇಡಿಕೆ ಆಧರಿಸಿ ಮಂಡಳಿಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
ಅಪಾರ್ಟ್‌ಮೆಂಟ್‌ಗಳ ನಿರ್ಮಾಣ
ಸೂರ್ಯನಗರ ಮೊದಲ ಹಂತದಲ್ಲಿ 2 ಬಿಎಚ್‌ಕೆಗೆ ಸೇರಿದ 40 ಹಾಗೂ 3 ಬಿಎಚ್‌ಕೆಗೆ ಸೇರಿದ 50 ಫ್ಲ್ಯಾಟ್‌ಗಳ ಅಪಾರ್ಟ್‌ಮೆಂಟ್ ನಿರ್ಮಿಸಲಾಗುತ್ತದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಕೆಲಸ ಶುರುವಾಗಿದೆ.
ಬೇಡಿಕೆ ಬಂದರೆ ಬೇರೆ ಕಡೆಯೂ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗುತ್ತದೆ. 2 ಬಿಎಚ್‌ಕೆಗೆ ₹88 ಲಕ್ಷ ಹಾಗೂ 3 ಬಿಎಚ್‌ಕೆಗೆ ₹1.60 ಕೋಟಿ ದರ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.