ADVERTISEMENT

ಬೆಂಗಳೂರು | ಸಾಲ ತೀರಿಸಲು ಅಪಹರಣ ನಾಟಕ: ವಾರ್ಡನ್‌ ಸೇರಿ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 0:35 IST
Last Updated 16 ಮಾರ್ಚ್ 2024, 0:35 IST
<div class="paragraphs"><p>ಬಂಧನ</p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಆನ್‌ಲೈನ್ ಜೂಜಾಟವಾಡಲು ಖರ್ಚು ಮಾಡಿದ್ದ ಹಾಗೂ ಸ್ನೇಹಿತರಿಂದ ಪಡೆದ ಸಾಲ ತೀರಿಸಲು ಅಪಹರಣ ನಾಟಕವಾಡಿದ್ದ ಆರೋಪದಡಿ ಕಾಲೇಜ್‌ವೊಂದರ ವಾರ್ಡನ್‌ ಸೇರಿ ನಾಲ್ವರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಹಾಸನದ ಜೀವನ್ (29), ಈತನ ಸ್ನೇಹಿತರಾದ ವಿನಯ್ (27), ಪೂರ್ಣೇಶ್ ಅಲಿಯಾಸ್ ಪ್ರೀತಮ್ (28) ಹಾಗೂ ರಾಜು (28) ಬಂಧಿತರು. ಇವರಿಂದ ನಾಲ್ಕು ಮೊಬೈಲ್ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಜೀವನ್, ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ. ಆನ್‌ಲೈನ್ ಜೂಜಿನಲ್ಲಿ ಹಣ ಕಳೆದುಕೊಂಡಿದ್ದ. ಸ್ನೇಹಿತರ ಬಳಿಯೂ ಹೆಚ್ಚು ಸಾಲ ಮಾಡಿದ್ದ. ಸಾಲ ವಾಪಸು ನೀಡುವಂತೆ ಸ್ನೇಹಿತರು ಪೀಡಿಸಲಾರಂಭಿಸಿದ್ದರು’ ಎಂದರು.

ಚಿಕ್ಕಮ್ಮನಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ: ‘ಆರೋಪಿ ಜೀವನ್‌ನ ಚಿಕ್ಕಮ್ಮ ಸಹ ಕಾಲೇಜ್‌ವೊಂದರ ಉದ್ಯೋಗಿ. ಚಿಕ್ಕಮ್ಮನ ಬಳಿ ಹಣವಿರುವುದನ್ನು ತಿಳಿದುಕೊಂಡಿದ್ದ ಆರೋಪಿ, ಅವರನ್ನು ಬೆದರಿಸಿ ಹಣ ಪಡೆಯಲು ಅಪಹರಣ ನಾಟಕಕ್ಕೆ ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಜೀವನ್ ಹಾಗೂ ಸ್ನೇಹಿತರು, ಕೊಠಡಿಯೊಂದಕ್ಕೆ ಹೋಗಿ ಮದ್ಯದ ಪಾರ್ಟಿ ಮಾಡಿದ್ದರು. ನಂತರ, ಜೀವನ್‌ ತಲೆ–ಹಣೆ ಮೇಲೆ ಟೊಮೆಟೊ ಸಾಸ್‌ ಹಚ್ಚಿದ್ದರು. ಅದನ್ನೇ ರಕ್ತವೆಂಬಂತೆ ಬಿಂಬಿಸಿ ಫೋಟೊ ತೆಗೆದಿದ್ದರು. ಅದೇ ಫೋಟೊವನ್ನು ಚಿಕ್ಕಮ್ಮ ಅವರಿಗೆ ಕಳುಹಿಸಿದ್ದ ಆರೋಪಿಗಳು, ‘ಜೀವನ್‌ನನ್ನು ಅಪಹರಣ ಮಾಡಿದ್ದೇವೆ. ₹1 ಲಕ್ಷ ನೀಡಬೇಕು. ಇಲ್ಲದಿದ್ದರೆ, ಕೊಲೆ ಮಾಡುತ್ತೇವೆ’ ಎಂಬುದಾಗಿ ಬೆದರಿಸಿದ್ದರು.’

‘ಫೋಟೊ ನೋಡಿ ಹೆದರಿದ್ದ ಚಿಕ್ಕಮ್ಮ, ಜೀವನ್‌ ಫೋನ್‌ ಪೇಗೆ ₹20 ಸಾವಿರ ಕಳುಹಿಸಿದ್ದರು. ಇದಾದ ನಂತರ ಅನುಮಾನ ಬಂದಿತ್ತು. ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು, ಆನೇಕಲ್ ತಾಲೂಕಿನ ಜಿಗಣಿ ಬಳಿಯ ಎಸ್. ಬಿಂಗೀಪುರ ಗ್ರಾಮದಲ್ಲಿ ಮದ್ಯದ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.