ADVERTISEMENT

ಮಾರಾಟಕ್ಕಾಗಿ ಮಗು ಅಪಹರಣ

ಹಣಕ್ಕಾಗಿ ಮಗನನ್ನೂ ಮಾರಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 22:41 IST
Last Updated 9 ಮಾರ್ಚ್ 2020, 22:41 IST
ಕರ್ಣ
ಕರ್ಣ   

ಬೆಂಗಳೂರು: ತನ್ನ ಮಗನ ಮಾರಾಟದಿಂದ ₹ 70 ಸಾವಿರ ಬರುತ್ತಿದ್ದಂತೆ, ಮಕ್ಕಳ ಮಾರಾಟವನ್ನೇ ದಂಧೆ ಮಾಡಿಕೊಂಡು ಕೂಲಿ ಕಾರ್ಮಿಕ ದಂಪತಿಯ ಮೂರು ವರ್ಷದ ಮಗುವನ್ನು ಅಪಹರಿಸಿದ್ದ ಆರೋಪದಡಿ ಕರ್ಣ (48) ಎಂಬಾತನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

‘ಶ್ರೀರಾಮಪುರದ ನಿವಾಸಿಯಾದ ಕರ್ಣ, ತನ್ನ ಸಂಬಂಧಿಯೇ ಆದ ಅಪ್ರಾಪ್ತನ ಜೊತೆ ಸೇರಿ ಕೃತ್ಯ ಎಸಗಿದ್ದ. ಅಪ್ರಾಪ್ತನನ್ನೂ ವಶಕ್ಕೆ ಪಡೆಯಲಾಗಿದೆ. ದೂರು ದಾಖಲಾದ 48 ಗಂಟೆಯಲ್ಲೇ ಮಗುವನ್ನು ರಕ್ಷಿಸಿ ಪೋಷಕರ ಸುಪರ್ದಿಗೆ ನೀಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಉತ್ತರ ಕರ್ನಾಟಕದ ಬಸವರಾಜ್ ಹಾಗೂ ಲಕ್ಷ್ಮಿ ದಂಪತಿ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯ ಸಿಂಗಪುರದ ಹೊಸಬಾಳು ನಗರದಲ್ಲಿ ವಾಸವಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರ ಮಗು ಅರ್ಜುನ್‌ನನ್ನು ಫೆ. 29ರಂದು ಆರೋಪಿ ಅಪಹರಿಸಿದ್ದ. ಮಾರಾಟ ಮಾಡಲು ಯತ್ನಿಸಿ ವಿಫಲನಾಗಿದ್ದ. ನಂತರ, ಮಲ್ಲೇಶ್ವರದ ದೇವಯ್ಯ ಪಾರ್ಕ್ ಬಳಿ ಮಗುವನ್ನು ಏಕಾಂಗಿಯಾಗಿ ಬಿಟ್ಟು ಪರಾರಿಯಾಗಿದ್ದ’ ಎಂದು ತಿಳಿಸಿದರು.

ADVERTISEMENT

‘ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿದ್ದ ಇನ್‌ಸ್ಪೆಕ್ಟರ್ ಪ್ರವೀಣ್ ಕುಮಾರ್ ನೇತೃತ್ವದ ತಂಡ, ಮಗುವನ್ನು ರಕ್ಷಿಸಿತ್ತು. ಆದರೆ, ಆರೋಪಿ ಸಿಕ್ಕಿಬಿದ್ದಿರಲಿಲ್ಲ. ಸ್ಥಳೀಯರು ನೀಡಿದ್ದ ಸುಳಿವು ಆಧರಿಸಿ ಇದೀಗ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ವಿವರಿಸಿದರು.

ಅಕ್ರಮ ಸಂಬಂಧ ಹೊಂದಿದ್ದ ಆರೋಪಿ: ‘ಪೇಟಿಂಗ್ ಕೆಲಸ ಮಾಡುತ್ತಿದ್ದ ಕರ್ಣನಿಗೆ ಮದುವೆಯಾಗಿ ನಾಲ್ವರು ಮಕ್ಕಳಿದ್ದಾರೆ. ಕೆಲ ವರ್ಷಗಳಿಂದ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ಆ ಮಹಿಳೆ ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಂತರ ಮಗುವನ್ನು ಆರೋಪಿಗೆ ಕೊಟ್ಟು ನಗರವನ್ನೇ ಬಿಟ್ಟು ಹೋಗಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಕರ್ಣನ ಸಂಬಂಧಿಕರೊಬ್ಬರಿಗೆ ಮದುವೆಯಾಗಿ 13 ವರ್ಷವಾದರೂ ಮಕ್ಕಳಾಗಿರಲಿಲ್ಲ. ತಾಯಿ ಇಲ್ಲದ ತನ್ನ ಮಗುವನ್ನು ಆತ ಸಂಬಂಧಿಕರಿಗೆ ನೀಡಿದ್ದ. ಅದಕ್ಕೆ ಪ್ರತಿಯಾಗಿ ₹70 ಸಾವಿರ ಪಡೆದುಕೊಂಡಿದ್ದ. ಇತ್ತೀಚೆಗೆ ಆರೋಪಿಗೆ ಹಣದ ಅವಶ್ಯಕತೆ ಎದುರಾಗಿತ್ತು. ಬೇರೊಬ್ಬರ ಮಗುವನ್ನು ಅಪಹರಿಸಿ ಮಾರಾಟ ಮಾಡಿದರೆ ಹಣ ಗಳಿಸಬಹುದೆಂದು ತಿಳಿದು ಕೃತ್ಯ ಎಸಗಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.