ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಸಂಸ್ಥೆಗೆ ನಿಯೋಜಿಸಿದ್ದ ಆಡಳಿತಾಧಿಕಾರಿಯನ್ನು ಹಿಂಪಡೆದಿರುವ ವೈದ್ಯಕೀಯ ಶಿಕ್ಷಣ ಇಲಾಖೆ, ನಿರ್ದೇಶಕರಿಗೆ ಪೂರ್ಣ ಅಧಿಕಾರ ನೀಡಿ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್ಎಂ) ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಆಡಳಿತಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಡಾ.ಟಿ.ನವೀನ್ ಅವರು ಪ್ರಭಾರ ನಿರ್ದೇಶಕ ಹುದ್ದೆಯಲ್ಲಿದ್ದರು. ಆಡಳಿತ, ಉಪಕರಣಗಳ ಖರೀದಿ, ಮಾನವ ಸಂಪನ್ಮೂಲದಂತಹ ವಿಭಾಗಗಳನ್ನು ಆಡಳಿತಾಧಿಕಾರಿ ನಿರ್ವಹಿಸಿದರೆ, ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಕರ್ತವ್ಯಗಳನ್ನು ನಿರ್ದೇಶಕರು ನಿಭಾಯಿಸುತ್ತಿದ್ದರು.
ಈ ಹಿಂದೆ ಸಂಸ್ಥೆಯಲ್ಲಿ ನಡೆದಿವೆ ಎನ್ನಲಾದ ಅವ್ಯವಹಾರ ಮತ್ತು ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡಿದ್ದ ಐಎಎಸ್ ಅಧಿಕಾರಿ ಡಾ. ಅರುಂಧತಿ ಚಂದ್ರಶೇಖರ್ ನೇತೃತ್ವದ ಸಮಿತಿ, ಸಂಸ್ಥೆಯ ಮೇಲ್ವಿಚಾರಣೆಗೆ ಆಡಳಿತಾಧಿಕಾರಿ ನೇಮಿಸುವಂತೆ ಶಿಫಾರಸು ಮಾಡಿತ್ತು. ಅದರಂತೆ ಸರ್ಕಾರವು ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು. ಈಗ ಈ ಹಿಂದಿನಂತೆ ಎಲ್ಲ ಜವಾಬ್ದಾರಿಗಳನ್ನು ಸಂಸ್ಥೆಯ ನಿರ್ದೇಶಕರಿಗೆ ನೀಡಿ ಆದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.