ADVERTISEMENT

ಕೆಟ್ಟ ರಸ್ತೆ: ಕಿರಣ್‌ ಮಜುಂದಾರ್‌ ಷಾ ಹೇಳಿಕೆಗೆ ಸಚಿವರ ತಿರುಗೇಟು

ಪದೇ ಪದೇ ‘ಎಕ್ಸ್‌’ ಮಾಡುವುದು ಒಳ್ಳೆಯ ಅಭಿರುಚಿಯಲ್ಲ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 16:18 IST
Last Updated 14 ಅಕ್ಟೋಬರ್ 2025, 16:18 IST
ಕಿರಣ್‌ ಮಜುಂದಾರ್‌ ಶಾ
ಕಿರಣ್‌ ಮಜುಂದಾರ್‌ ಶಾ   

ಬೆಂಗಳೂರು: ‘ನಗರದಲ್ಲಿ ಕೆಟ್ಟ ರಸ್ತೆಗಳಿವೆ, ತ್ಯಾಜ್ಯದ ಸಮಸ್ಯೆ ಇದೆ’ ಎಂದು ಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಅವರು ‘ಎಕ್ಸ್‌’ ಮೂಲಕ ನೀಡಿರುವ ಹೇಳಿಕೆಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ, ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

‘ರಸ್ತೆಗಳು ಏಕೆ ಇಷ್ಟೊಂದು ಕೆಟ್ಟದಾಗಿವೆ ಮತ್ತು ಸುತ್ತಮುತ್ತ ತ್ಯಾಜ್ಯ ಏಕಿದೆ? ಹೂಡಿಕೆಗೆ ಸರ್ಕಾರ ನೆರವು ನೀಡುವುದಿಲ್ಲವೇ? ನಾನು ಚೀನಾದಿಂದ ಈಗ ತಾನೇ ಬಂದೆ. ವಾತಾವರಣದ ಅನುಕೂಲವಿದ್ದರೂ ಭಾರತ ಏಕೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿಲ್ಲ?’ ಎಂದು ಬಯೊ ಪಾರ್ಕ್‌ಗೆ ಬಂದಿದ್ದ ಉದ್ಯಮಿಯೊಬ್ಬರು ನನ್ನನ್ನು ಹೀಗೆ ಕೇಳಿದರು’ ಎಂದು ಕಿರಣ್‌ ಮಜುಂದಾರ್‌ ಷಾ ಅವರು ‘ಎಕ್ಸ್’ ಮಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಐಟಿ–ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಟ್ಯಾಗ್‌ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ, ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ‘ಕಿರಣ್‌ ಮಜುಂದಾರ್‌ ಅವರು ಕರ್ನಾಟಕ ಹಾಗೂ ದೇಶಕ್ಕೆ ದೊಡ್ಡ ಆಸ್ತಿ. ಬಯೊಕಾನ್‌ನೊಂದಿಗೆ ಬೆಂಗಳೂರಿಗೆ ಅವರು ಹೆಸರು ಸೃಷ್ಟಿಸಿದ್ದಾರೆ. ಬೆಂಗಳೂರು ಕೂಡ ಅವರಿಗೆ ಸಾಕಷ್ಟು ನೀಡಿದೆ. ಇದು ಪರಸ್ಪರ ಅನುಕೂಲಕರ. ಹೆಚ್ಚು ಮಳೆಯಾದ ಕಾರಣ ರಸ್ತೆಗಳಲ್ಲಿ ಗುಂಡಿಗಳು ಇದ್ದವು. ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಸಾವಿರಾರು ಕೋಟಿಯನ್ನು ನೀಡಲಾಗಿದೆ. ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ನೀವು ಮತ್ತೆ ಮತ್ತೆ ‘ಎಕ್ಸ್‌’ ಮಾಡುವುದು ಉತ್ತಮ ಅಭಿರುಚಿಯಲ್ಲ’ ಎಂದಿದ್ದಾರೆ.

ADVERTISEMENT

‘ಬೆಂಗಳೂರಿನ ಯಾವ ಭಾಗವನ್ನು ಅವರು ನೋಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಕಾಮಗಾರಿ ನಡೆಯುತ್ತಿದೆ. ಕ್ಷಿಪ್ರ ವೇಗದಲ್ಲಿ ಕೆಲಸ ನಡೆಯುತ್ತಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ಏನು ಅಗತ್ಯವಿದೆಯೋ  ಅದನ್ನು ನಾವು ಮಾಡುತ್ತಿದ್ದೇವೆ’ ಎಂದು ಪ್ರಿಯಾಂಗ್‌ ಖರ್ಗೆ ಪ್ರತಿಕ್ರಿಯಿಸಿದರು.

ಮಂಗಳಾರತಿ: ‘ಕಿರಣ್ ಮಜುಂದಾರ್ ಅವರ ‘ಎಕ್ಸ್‌’ ಹೇಳಿಕೆ, ಸರ್ಕಾರ ಹಾಗೂ ಡಿ.ಕೆ. ಶಿವಕುಮಾರ್‌ ಅವರ ಮುಖಕ್ಕೆ ಮಂಗಳಾರತಿ ಎತ್ತಿದಂತಲ್ಲವೇ? ಬ್ಲ್ಯಾಕ್‌ ಬಗ್‌ ಸಂಸ್ಥೆಗೆ ಬೇಕಾದರೆ ಇಲ್ಲಿಂದ ಹೋಗಲಿ ಎಂದಿದ್ದ ಶಿವಕುಮಾರ್ ಅವರು, ಈಗ ಕಿರಣ್‌ ಮಂಜುಂದಾರ್‌ ಅವರಿಗೂ ಅದೇ ರೀತಿ ಹೇಳಲಿ ನೋಡೋಣ’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸವಾಲು ಹಾಕಿದ್ದಾರೆ.

ಡಿ.ಕೆ. ಶಿವಕುಮಾರ್
ಎಂ.ಬಿ.ಪಾಟೀಲ
ಪ್ರಿಯಾಂಕ್‌ ಖರ್ಗೆ
ಆರ್. ಅಶೋಕ

Cut-off box - ಬೆಂಗಳೂರಿಗೆ ಋಣಿಯಾಗಿರೋಣ:ಡಿಕೆಶಿ ‘ಬೆಂಗಳೂರು ಲಕ್ಷಾಂತರ ಜನರಿಗೆ ಅವಕಾಶಗಳು ಗುರುತು ಮತ್ತು ಯಶಸ್ಸನ್ನು ನೀಡಿದೆ. ಇದಕ್ಕೆ ಕಾರಣ ಸಾಮೂಹಿಕ ಪ್ರಯತ್ನ ನಿರಂತರ ಟೀಕೆಯಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ‘ಎಕ್ಸ್’ನಲ್ಲಿ ಹೇಳಿದ್ದಾರೆ. ‘ಹೌದು ಸವಾಲುಗಳಿವೆ ಅವುಗಳನ್ನು ತುರ್ತಾಗಿ ಬಗೆಹರಿಸುತ್ತಿದ್ದೇವೆ. ರಸ್ತೆಗಳ ದುರಸ್ತಿಗಾಗಿ ₹1100 ಕೋಟಿ ಮಂಜೂರು ಮಾಡಲಾಗಿದೆ. 10 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿದೆ ಐದು ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಲಾಗಿದೆ. ಬೆಂಗಳೂರನ್ನು ಜಾಗತಿಕವಾಗಿ ಹೆಚ್ಚು ಸ್ಪರ್ಧಾತ್ಮಕವಾಗಿಸಲು ಪ್ರಮುಖ ಮೂಲಸೌಕರ್ಯ ಕಾರ್ಯಗಳು ನಡೆಯುತ್ತಿವೆ’ ಎಂದು ಹೇಳಿದ್ದಾರೆ. ‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಪೂರ್ವ ನಗರ ಪಾಲಿಕೆ ತನ್ನದೇ ಆದ ₹1673 ಕೋಟಿ ಆದಾಯವನ್ನು ಉಳಿಸಿಕೊಂಡು ಅದನ್ನು 50 ವಾರ್ಡ್‌ಗಳಲ್ಲಿ ಮೂಲಸೌಕರ್ಯಕ್ಕಾಗಿ ನೇರವಾಗಿ ಬಳಸಿಕೊಳ್ಳಲಿದೆ. ಇದು ನಮ್ಮ ಐಟಿ ಕಾರಿಡಾರ್‌ಗಳಿಗೆ ನೇರವಾಗಿ ಪ್ರಯೋಜನವಾಗುತ್ತದೆ. ಸೆಂಟ್ರಲ್‌ ಸಿಲ್ಕ್ ಬೋರ್ಡ್‌– ಕೆ.ಆರ್‌. ಪುರದ ಮರುಅಭಿವೃದ್ಧಿ ಎಲಿವೇಟೆಡ್ ಕಾರಿಡಾರ್‌ಗಳಂತಹ ಪ್ರಮುಖ ಕಾಮಗಾರಿಗಳೊಂದಿಗೆ ನಾಗರಿಕರು ಉದ್ಯೋಗಿಗಳು ಮತ್ತು ಕಂಪನಿಗಳಿಗೆ ಮೂಲಸೌಕರ್ಯವನ್ನು ನೀಡಲಿದ್ದೇವೆ’ ಎಂದಿದ್ದಾರೆ. ‘ಬೆಂಗಳೂರನ್ನು ಕಡೆಗಣಿಸಿ ಮಾತನಾಡುವ ಬದಲು ಒಟ್ಟಾಗಿ ಅದನ್ನು ನಿರ್ಮಿಸೋಣ. ಜಗತ್ತು ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ. ಒಗ್ಗಟ್ಟಿನಿಂದ ನಮ್ಮ ನಗರಕ್ಕೆ ಋಣಿಯಾಗಿರೋಣ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.