ADVERTISEMENT

ಸವ್ಯಸಾಚಿಯಾಗಿದ್ದ ಶಾಂತವೀರ ಸ್ವಾಮೀಜಿ: ಶಿವಮೂರ್ತಿ ಮುರುಘಾ ಶರಣರು

ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಮೇ 2022, 20:09 IST
Last Updated 10 ಮೇ 2022, 20:09 IST
ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು. (ಎಡದಿಂದ) ಮಲ್ಲಿಕಾರ್ಜುನ ದೇವರು, ತಮಿಳುನಾಡಿನ ಸಿದ್ದಲಿಂಗಸ್ವಾಮಿ, ಚಿದ್ಘನ ಸ್ವಾಮಿ,  ಶಿವರುದ್ರ ಸ್ವಾಮಿ ಹಾಗೂ ಮುಮ್ಮಡಿ ಶಿವರುದ್ರ ಸ್ವಾಮಿ ಇದ್ದರು– ಪ್ರಜಾವಾಣಿ ಚಿತ್ರ 
ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು. (ಎಡದಿಂದ) ಮಲ್ಲಿಕಾರ್ಜುನ ದೇವರು, ತಮಿಳುನಾಡಿನ ಸಿದ್ದಲಿಂಗಸ್ವಾಮಿ, ಚಿದ್ಘನ ಸ್ವಾಮಿ,  ಶಿವರುದ್ರ ಸ್ವಾಮಿ ಹಾಗೂ ಮುಮ್ಮಡಿ ಶಿವರುದ್ರ ಸ್ವಾಮಿ ಇದ್ದರು– ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಕೊಳದಮಠ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿಯವರು ಸವ್ಯಸಾಚಿಯಾಗಿದ್ದರು. ವಿದ್ವತ್‌ ಹಾಗೂ ಪಾಂಡಿತ್ಯದ ಮೂಲಕ ಸಮಾಜ ತಿದ್ದುವ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಸ್ವಾಮೀಜಿಗಳಲ್ಲಿ ಅವರು ಅಗ್ರಗಣ್ಯರು’ ಎಂದು ಚಿತ್ರದುರ್ಗದ ಮುರುಘ ರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಕೊಳದಮಠದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶಾಂತವೀರ ಸ್ವಾಮಿಯವರ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಾಂತವೀರರು ಕೆಲ ಜವಾಬ್ದಾರಿಗಳನ್ನು ಬಿಟ್ಟು ಹೋಗಿದ್ದಾರೆ. ಎಲ್ಲಾ ಸ್ವಾಮೀಜಿಗಳ ಜೊತೆ ಸಮಾಲೋಚಿಸಿ ಮಠದ ಉತ್ತರಾಧಿಕಾರಿಯನ್ನು ನೇಮಿಸುವ ಕೆಲಸ ಮಾಡಲಾಗುತ್ತದೆ’ ಎಂದರು.

ADVERTISEMENT

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್‌, ‘ನೊಂದವರ ಧ್ವನಿಯಾಗಿದ್ದ ಶ್ರೀಗಳು ನಿರ್ಭಿಡೆಯ ವ್ಯಕ್ತಿತ್ವ ಹೊಂದಿದ್ದರು’ ಎಂದು ಹೇಳಿದರು.

ಗಂಜಾಂ ಮಠದ ಚಿದ್ಘನ ಸ್ವಾಮೀಜಿ, ‘ಸ್ವಾಮೀಜಿಯವರು ಮಠಕ್ಕೆ ಯಾರೇ ಭೇಟಿ ನೀಡಿದರೂ ನಗುತ್ತಲೇ ಬರಮಾಡಿಕೊಳ್ಳುತ್ತಿದ್ದರು. ಎಷ್ಟೇ ಕಷ್ಟ ಎದುರಾದರೂ ಸಹಾಯಕ್ಕಾಗಿ ಯಾರ ಬಳಿಯೂ ಅಂಗಲಾಚಲಿಲ್ಲ’ ಎಂದು ಸ್ಮರಿಸಿದರು.

ಸರ್ಪಭೂಷಣ ಶಿವಯೋಗಿ ಮಠದ ಮಲ್ಲಿಕಾರ್ಜುನ ದೇವರು, ‘ಬೇಡ ಜಂಗಮರಿಗೂ ಮೀಸಲಾತಿ ದೊರೆಯಬೇಕು ಎಂಬ ಸಂಕಲ್ಪ ಸ್ವಾಮಿಜಿಯವರದಾಗಿತ್ತು. ಅವರು ಜಾತ್ಯತೀತ ತತ್ವ ಪ್ರತಿಪಾದಿಸಿದ ಮಹಾನುಭಾವರು’ ಎಂದರು.

ನಿವೃತ್ತ ಐಪಿಎಸ್‌ ಅಧಿಕಾರಿ ಜ್ಯೋತಿಪ್ರಕಾಶ್‌ ಮಿರ್ಜಿ,‘ಕೊಳದಮಠದ ಸ್ವಾಮೀಜಿಯವರ ಆಶೀರ್ವಾದದಿಂದಲೇ ನನಗೆ ಕೆಲಸ ಸಿಕ್ಕಿತ್ತು. ಎಲ್ಲಿ, ಯಾರಿಗೇ ಕಷ್ಟ ಬಂದರೂ ಖುದ್ದಾಗಿ ಹಾಜರಾಗಿ ಸಹಾಯ ಮಾಡುತ್ತಿದ್ದರು’ ಎಂದು ಹೇಳಿದರು.

ಮರಳೇಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ‘ಸ್ವಾಮೀಜಿಯವರು ಶಾಂತಿ ಹಾಗೂ ಕ್ರಾಂತಿಯ ಮೂರ್ತಿಯಂತಿದ್ದರು. ಕರುಣಾಮೂರ್ತಿಯಾಗಿ ಎಲ್ಲರನ್ನೂ ಹರಸುತ್ತಿದ್ದರು’ ಎಂದರು.

ಬೇಲಿಮಠ ಮಹಾಸಂಸ್ಥಾನದ ಶಿವರುದ್ರ ಸ್ವಾಮೀಜಿ, ‘ಸಮಾಜಮುಖಿ ಚಿಂತನೆ ಮೈಗೂಡಿಸಿಕೊಂಡಿದ್ದ ಶಾಂತವೀರರ ಜನಪರ ಕಾರ್ಯಗಳಿಂದಾಗಿ ಕೊಳದಮಠವು ಜನಮಾನಸದಲ್ಲಿ ಗಟ್ಟಿಯಾಗಿ ನೆಲೆಯೂರಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.