ADVERTISEMENT

29ರಿಂದ ಸಂದರ್ಶನ: ಕೆಪಿಎಸ್‌ಸಿ ಭರವಸೆ

ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಂಡ ಶಾಸಕ ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 20:26 IST
Last Updated 3 ಜುಲೈ 2019, 20:26 IST

ಬೆಂಗಳೂರು: 2015ನೇ ಸಾಲಿನ 428 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ವ್ಯಕ್ತಿತ್ವ ಪರೀಕ್ಷೆಯ (ಸಂದರ್ಶನ) ದಿನ ಪ್ರಕಟಿಸಬೇಕೆಂದು ಆಗ್ರಹಿಸಿ ಬಿಜೆಪಿ ಶಾಸಕ ಎಸ್‌. ಸುರೇಶ್‍ಕುಮಾರ್ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗುತ್ತಿದ್ದಂತೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಸ್‌ಸಿ) ಪರೀಕ್ಷಾ ದಿನಾಂಕ ಪ್ರಕಟಿಸಿದೆ.

ಬುಧವಾರ ಬೆಳಿಗ್ಗೆ 8 ಗಂಟೆಗೆ ಕೆಪಿಎಸ್‍ಸಿ ಕಚೇರಿ ಎದುರು ಅಭ್ಯರ್ಥಿಗಳ ಜೊತೆ ಸುರೇಶ್‌ ಕುಮಾರ್‌ ಸತ್ಯಾಗ್ರಹ ಆರಂಭಿಸಿದ್ದರು. ಈ ಮಾಹಿತಿ ಗೊತ್ತಾಗುತ್ತಿದ್ದಂತೆ, ಸಂದರ್ಶನಕ್ಕೆ ದಿನ ನಿಗದಿಪಡಿಸಿರುವ ವಿಷಯವನ್ನು ಕೆಪಿಎಸ್‌ಸಿ ಕಾರ್ಯದರ್ಶಿ ಆರ್‌.ಆರ್‌. ಜನ್ನು ಲಿಖಿತವಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಅವರು ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಂಡರು.

‘ಸಂದರ್ಶನ ಆರಂಭಿಸುವ ಕುರಿತು ಲಿಖಿತವಾಗಿ ಭರವಸೆ ದೊರೆತಿರುವುದರಿಂದ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದೇನೆ’‌ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

ADVERTISEMENT

‘ಕೆಪಿಎಸ್‍ಸಿ ಕಾರ್ಯವೈಖರಿ ಬದಲಾಗದಿದ್ದರೆ ಈ ಸಂಸ್ಥೆಯ ಸ್ಥಾಪನೆಯ ಉದ್ದೇಶವೇ ವಿಫಲವಾಗುತ್ತದೆ. ಹೋಟಾ ಸಮಿತಿಯ ಶಿಫಾರಸಿನಂತೆ ವ್ಯಕ್ತಿತ್ವ ಪರೀಕ್ಷೆ ಪಾರದರ್ಶಕವಾಗಿ ನಡೆಯಬೇಕು. ಯಾವುದೇ ಅನ್ಯಾಯಕ್ಕೆ ಅವಕಾಶ ನೀಡಬಾರದು’ ಎಂದೂ ಅವರು ಆಗ್ರಹಿಸಿದರು.2015ರ ಸಾಲಿನ ಗೆಜೆಟೆಡ್‌ಪ್ರೊಬೇಷನರಿ ಹುದ್ದೆಗಳ ಆಯ್ಕೆಗಾಗಿ 2017ರ ಡಿ.16ರಿಂದ 23ರವರೆಗೆ ಮುಖ್ಯ ಪರೀಕ್ಷೆ ನಡೆದಿತ್ತು. ಇದೀಗ ಒಂದೂವರೆ ವರ್ಷ ಕಳೆದರೂಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದನ್ನು ಪ್ರತಿಭಟಿಸಿ ಇತ್ತೀಚೆಗಷ್ಟೇ ಸುರೇಶ್‍ಕುಮಾರ್ ಅಭ್ಯರ್ಥಿಗಳ ಜೊತೆ ಕೆಪಿಎಸ್‍ಸಿ ಮುಂದೆ ಪ್ರತಿಭಟನೆ ಕೂಡ ನಡೆಸಿದ್ದರು. ಮುಖ್ಯಮಂತ್ರಿಗೂ ಈ ಬಗ್ಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.