ಬೆಂಗಳೂರು: 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಸಂಘಟನೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
‘ಕಳೆದ ವರ್ಷದ ಆಗಸ್ಟ್ 27ರಂದು ನಡೆದ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯ ಆಗಿತ್ತು. ಡಿಸೆಂಬರ್ 29 ರಂದು ನಡೆದ ಮರು ಪರೀಕ್ಷೆಯಲ್ಲೂ ಅದು ಪುನರಾವರ್ತನೆ ಆಗಿದೆ. ಕೆಪಿಎಸ್‌ಸಿ ಪದೇ ಪದೇ ಎಡವಟ್ಟು ಮಾಡುತ್ತಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.
ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ಕೆಪಿಎಸ್‌ಸಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಿರುವ ಎಲ್ಲ ಬಗೆಯ ಭ್ರಷ್ಟಾಚಾರದ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಮರು ಪರೀಕ್ಷೆಯಲ್ಲಿ ಕನ್ನಡ ಭಾಷೆಯ ಯಾವ ನಿಘಂಟಿನಲ್ಲೂ ಇಲ್ಲದ ಪದಗಳನ್ನು ಬಳಸಿ, ಪ್ರಶ್ನೆಗಳನ್ನು ಕೇಳಲಾಗಿದೆ. ಹೊಸ ಹೊಸ ಪದಗಳನ್ನು ಕೆಪಿಎಸ್‌ಸಿ ಅಧಿಕಾರಿಗಳೇ ಸೃಷ್ಟಿಸಿದ್ದಾರೆ ಎಂದು ಹೇಳಿದರು.
ಕೆಪಿಎಸ್‌ಸಿ ಪರೀಕ್ಷೆ ಫಲಿತಾಂಶ ತಡೆಹಿಡಿಯುವುದರ ಜತೆಗೆ ಪರೀಕ್ಷೆಯನ್ನು ರದ್ದುಪಡಿಸಬೇಕು. ಹೊಸದಾಗಿ ಅಧಿಸೂಚನೆ ಹೊರಡಿಸಿ, ಮತ್ತೊಮ್ಮೆ ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಅವರ ರಾಜ್ಯಕ್ಕೆ ವಾಪಸ್ ಕಳುಹಿಸಬೇಕು. ಕನ್ನಡ ಆಡಳಿತ ಭಾಷಾ ಕಾಯ್ದೆ ಉಲ್ಲಂಘಿಸಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪರೀಕ್ಷೆಯನ್ನು ಸಮರ್ಥವಾಗಿ ನಡೆಸಲು ವಿಫಲರಾಗಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಂದ ರಾಜೀನಾಮೆ ಪಡೆದುಕೊಳ್ಳಬೇಕು. ಆ ಸ್ಥಾನಕ್ಕೆ ಕನ್ನಡಿಗರ ಕುರಿತು ಕಾಳಜಿಯುಳ್ಳ ವ್ಯಕ್ತಿಯನ್ನು ನೇಮಿಸಬೇಕು ಎಂದು ಒತ್ತಾಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.