ADVERTISEMENT

ಕಪ್ಪು ಪಟ್ಟಿಯಲ್ಲಿದ್ದ ಸಂಸ್ಥೆಗೆ ಗುತ್ತಿಗೆ: ಪ್ರಶ್ನಿಸಿದ ಅಧಿಕಾರಿ ಎತ್ತಂಗಡಿ?

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 19:42 IST
Last Updated 12 ಜೂನ್ 2019, 19:42 IST
   

ಬೆಂಗಳೂರು: ಕಪ್ಪು ಪಟ್ಟಿಗೆ ಸೇರಿದ್ದ ‘ಕೆಇಸಿ ಇಂಟರ್‌ನ್ಯಾಷನ್ ಲಿಮಿಟೆಡ್’ ಕಂಪೆನಿಗೆ ವಿದ್ಯುತ್ ಸರಬರಾಜು ಮಾಡುವ ಗುತ್ತಿಗೆ ನೀಡಲು ವಿರೋಧ ವ್ಯಕ್ತಪಡಿಸಿದ ಕೆಪಿಟಿಸಿಎಲ್ (ಹಣಕಾಸು) ವಿಭಾಗದ ಅಧಿಕಾರಿಯನ್ನೇ ಎತ್ತಂಗಡಿ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಕಳೆದ ಮಾರ್ಚ್ 6ರಂದು ನಡೆದಕೆಪಿಟಿಸಿಎಲ್ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ಕಪ್ಪು ಪಟ್ಟಿಗೆ ಸೇರಿದ ಕಂಪನಿಗೆ ಗುತ್ತಿಗೆ ನೀಡಿರುವ ವಿಚಾರ ಚರ್ಚೆಗೆ ಬಂದಿದೆ.

‘ಬಿಡ್ ಸಲ್ಲಿಸುವ ಸಮಯದಲ್ಲಿ ಮಧ್ಯಪ್ರದೇಶ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿದ್ದ ಬಗ್ಗೆ ಉದ್ದೇಶಪೂರ್ವಕವಾಗಿ ಕೆಇಸಿ ಕಂಪನಿ ಮಾಹಿತಿ ನೀಡಿಲ್ಲ. ಈ ಕಂಪನಿ 2021ರವರೆಗೆ ಗುತ್ತಿಗೆ ಪಡೆಯಲು ಅರ್ಹವಾಗಿಲ್ಲ. ಈ ಸಂಸ್ಥೆಯನ್ನು ಗುತ್ತಿಗೆ ನೀಡಲು ಪರಿಗಣಿಸಬಾರದು’ ಎಂದು ಎತ್ತಂಗಡಿಗೆ ಒಳಗಾಗಿರುವ ಅಧಿಕಾರಿ ಪ್ರತಿಪಾದಿಸಿದ್ದರು. ಈ ಕಾರಣಕ್ಕಾಗಿಯೇ ಬೇರೆ ಕಡೆಗೆ ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ADVERTISEMENT

2014ರಿಂದ 2018ರ ಅವಧಿಯಲ್ಲಿ ವಿದ್ಯುತ್ ವಿತರಣಾ ಜಾಲ ನಿರ್ಮಾಣದ ಕಾಮಗಾರಿಯನ್ನು ಈ ಕಂಪನಿ ನಿರ್ವಹಿಸಿದೆ. ಒಟ್ಟಾರೆ ₹2,871 ಕೋಟಿ ಮೊತ್ತದ ಕಾಮಗಾರಿಗಳನ್ನು ಈ ಕಂಪನಿಗೆ ಗುತ್ತಿಗೆ ನೀಡಲಾಗಿದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ಕಾಮಗಾರಿಗಳನ್ನು ನೀಡಲಾಗಿತ್ತು.ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮತ್ತಷ್ಟು ಕಾಮಗಾರಿಗಳನ್ನು ನೀಡುವ ಸಂಬಂಧ ಕೆಪಿಟಿಸಿಎಲ್‌ ಆಡಳಿತ ಮಂಡಳಿ ಮುಂದೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಮಂಡಳಿಗೆ ಮುಖ್ಯಮಂತ್ರಿಯೇ ಅಧ್ಯಕ್ಷರಾಗಿದ್ದು, ಇಂಧನ ಖಾತೆಯೂ ಅವರ ಉಸ್ತುವಾರಿಯಲ್ಲೇ ಇದೆ. ಆಡಳಿತ ಮಂಡಳಿ ಸಭೆ ನಡೆದಾಗ, ಕಪ್ಪು ಪಟ್ಟಿಗೆ ಸೇರಿರುವ ಕಂಪನಿಗೆ ಗುತ್ತಿಗೆ ನೀಡುವ ಬಗ್ಗೆ ಅಧಿಕಾರಿ ಆಕ್ಷೇಪ ಎತ್ತಿದ್ದರು.

2013ರಿಂದ ನವೆಂಬರ್ 2016ರ ಅವಧಿಯಲ್ಲಿ ಮಧ್ಯಪ್ರದೇಶದ ‘ಮಧ್ಯಕ್ಷೇತ್ರ ವಿದ್ಯುತ್ ವಿತರಣಾ ಕಂಪನಿ’ಯು ಕೆಇಸಿ ಲಿಮಿಟೆಡ್‌ ಅನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಇದನ್ನು ಪ್ರಶ್ನಿಸಿ 2015ರಲ್ಲಿ ಕೆಇಸಿ ಅಲ್ಲಿನ ಹೈಕೋರ್ಟ್ ಮೆಟ್ಟಿಲೇರಿತ್ತು. ಮೊದಲು ತಡೆಯಾಜ್ಞೆ ನೀಡಿದ್ದ ಹೈಕೋರ್ಟ್‌ 2017ರ ಏಪ್ರಿಲ್‌ನಲ್ಲಿ ಅದನ್ನು ತೆರವುಗೊಳಿಸಿತ್ತು. ಕಪ್ಪು ಪಟ್ಟಿಯಿಂದ ತೆರವು ಮಾಡಬೇಕು ಎಂದು 2018ರ ಜನವರಿಯಲ್ಲಿ ಕೆಇಸಿ ಮೇಲ್ಮನವಿ ಸಲ್ಲಿಸಿತ್ತು. ಆ ವೇಳೆ ಅರ್ಜಿಯೇ ಅಪ್ರಸ್ತುತ ಎಂದು ಹೇಳಿದ್ದ ಹೈಕೋರ್ಟ್ ಅರ್ಜಿಯನ್ನು ವಿಲೇವಾರಿ ಮಾಡಿತ್ತು.

ಕೇಂದ್ರ ಸರ್ಕಾರ ನಿರ್ವಹಿಸುತ್ತಿರುವ ದೀನ್‌ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಲ್ಲಿ ಈಗಲೂ ಈ ಕಂಪನಿ ಕಪ್ಪುಪಟ್ಟಿಯಲ್ಲಿದೆ.

‘ಕಾನೂನು ತಜ್ಞರ ಸಲಹೆ ಮೇರೆಗೆಕೆಇಸಿಗೆ ಗುತ್ತಿಗೆ ನೀಡಲು ಮಂಡಳಿ ನಿರ್ಧರಿಸಿತ್ತು’ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಸೆಲ್ವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.