ADVERTISEMENT

ಕೆ.ಆರ್‌.ಮಾರುಕಟ್ಟೆ ಅಕ್ರಮ ಮಳಿಗೆ ತೆರವು: ಪರಿಶೀಲನಾ ವರದಿ ಸಲ್ಲಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 19:33 IST
Last Updated 3 ಏಪ್ರಿಲ್ 2019, 19:33 IST

ಬೆಂಗಳೂರು: ‘ನಗರದ ಕೆ.ಆರ್. ಮಾರುಕಟ್ಟೆಯಲ್ಲಿನ ಅಕ್ರಮ ಮಳಿಗೆಗಳ ಒತ್ತುವರಿ ತೆರವು ಕಾರ್ಯಾಚರಣೆ ಕುರಿತಂತೆ ಪರಿಶೀಲನಾ ವರದಿ ಸಲ್ಲಿಸಿ’ ಎಂದು ಅಗ್ನಿಶಾಮಕ ಇಲಾಖೆಗೆ ಹೈಕೋರ್ಟ್‌ ಸೂಚಿಸಿದೆ.

‘ಮಾರುಕಟ್ಟೆ ಸಂಕೀರ್ಣದಲ್ಲಿ ಅಗ್ನಿ ಅವಘಡ ಸಂಭವಿಸಿದರೆ, ಅಗ್ನಿ ಶಾಮಕ ದಳದ ವಾಹನ ಸಂಚರಿಸಲು ಇರಬೇಕಾದ ತುರ್ತು ನಿರ್ಗಮನದ ಸ್ಥಳ ಇದೆಯೊ ಇಲ್ಲವೋ ಎಂಬುದನ್ನು ಪರಿಶೀಲಿಸಿ ತಿಳಿಸಿ’ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಹೇಳಿದೆ.

‘ಮಾರುಕಟ್ಟೆ ಸಂಕೀರ್ಣದ ವ್ಯಾಪ್ತಿಯಲ್ಲಿರುವ ಅಕ್ರಮ ಮಳಿಗೆಗಳನ್ನು ತೆರವುಗೊಳಿಸಬೇಕು’ ಎಂದು ಕೋರಿ, ‘ಬೆಂಗಳೂರು ಹೂವು ವ್ಯಾಪಾರಿಗಳ ಸಂಘ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಅವರು, ಅಕ್ರಮ ಮಳಿಗೆ ತೆರವು ಕಾರ್ಯಾಚರಣೆ ಕುರಿತು ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತರ ಪ್ರಗತಿ ವರದಿಯನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ ರಹಮತ್‌ ಉಲ್ಲಾ ಕೊತ್ವಾಲ್‌ ಅವರು, ‘ಕೇವಲ ಪಾದಚಾರಿ ಮಾರ್ಗದಲ್ಲಿದ್ದ ಒತ್ತುವರಿ ತೆರವುಗೊಳಿಸಲಾಗಿದೆ. ಆದರೆ, ಅಕ್ರಮ ಮಳಿಗೆಗಳನ್ನು ತೆರವುಗೊಳಿಸಿಲ್ಲ’ ಎಂದು ದೂರಿದರು. ಈ ಕುರಿತಂತೆ ಸ್ಥಳದ ಫೋಟೊಗ್ರಾಫ್‌ಗಳನ್ನು ಮೆಮೊ ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿದರು.

ಇದಕ್ಕೆ ಉತ್ತರಿಸಿದ ಶ್ರೀನಿಧಿ, ‘ಈ ಮಳಿಗೆಗಳು ವ್ಯಾಜ್ಯದಲ್ಲಿದ್ದು ಇವುಗಳನ್ನು ತೆರವುಗೊಳಿಸದಂತೆ ಕೋರ್ಟ್‌ನಿಂದ ತಡೆಯಾಜ್ಞೆ ಇದೆ. ಆದಾಗ್ಯೂ ಹೈಕೋರ್ಟ್‌ ನಿರ್ದೇಶನದಂತೆ ತೃಪ್ತಿಕರ ತೆರವು ಕಾರ್ಯಾಚರಣೆ ನಡೆಸಲಾಗಿದೆ’ ಎಂದು ವಿವರಿಸಿದರು.

ಇದನ್ನು ಪರಿಶೀಲಿಸಿದ ನ್ಯಾಯಪೀಠ, ‘ಕಾರ್ಯಾಚರಣೆ ತೃಪ್ತಿಕರವಾಗಿದೆಯೇ ಇಲ್ಲವೇ ಎಂಬ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಸೂಚಿಸಿ ವಿಚಾರಣೆಯನ್ನು ಇದೇ 9ಕ್ಕೆ ಮುಂದೂಡಿದೆ.

ಪ್ರಮಾಣ ಪತ್ರದಲ್ಲೇನಿದೆ?: ‘ಕೆ.ಆರ್. ಮಾರುಕಟ್ಟೆಯಲ್ಲಿರುವ ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. ಅಗ್ನಿಶಾಮಕ ಇಲಾಖೆ ನಿರ್ದೇಶನದಂತೆ ಮಾರುಕಟ್ಟೆಯ ಎಲ್ಲ ರಸ್ತೆಗಳನ್ನು 8 ಮೀಟರ್‌ನಷ್ಟು ಮುಕ್ತಗೊಳಿಸಲಾಗಿದೆ. ಅಗ್ನಿಶಾಮಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಚಿಕ್ಕಪೇಟೆ ಮೆಟ್ರೊ ರೈಲು ನಿಲ್ದಾಣದಿಂದ ಕೆ.ಆರ್. ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ಅಕ್ರಮ ಒತ್ತುವರಿ ತೆರವು ಮಾಡಲಾಗಿದೆ’ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

ಕೋರ್ಟ್‌ ಆದೇಶದನ್ವಯ ತೆರವು: ‘ಮಾರುಕಟ್ಟೆ ಸಂಕೀರ್ಣದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಒಂದು ವಾರದೊಳಗೆ ತೆರವುಗೊಳಿಸಬೇಕು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ವಸ್ತಸ್ಥಿತಿಯ ವರದಿ ಸಲ್ಲಿಸಬೇಕು’ ಎಂದು ನ್ಯಾಯಪೀಠ ಕಳೆದ ತಿಂಗಳ 27ರಂದು ಆದೇಶಿಸಿತ್ತು.

ಈ ಆದೇಶದ ಅನ್ವಯ ಬಿಬಿಎಂಪಿ ಮಾರ್ಚ್‌ 29ರಂದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರ ನೆರವು ಪಡೆದು ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.