ADVERTISEMENT

ಕೆ.ಆರ್.ಪುರದ ಬೆಳತೂರು: ರಸ್ತೆ ಮೇಲೆ ಕೊಳಚೆ ನೀರು

ಸಾರ್ವಜನಿಕರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 30 ಮೇ 2023, 7:32 IST
Last Updated 30 ಮೇ 2023, 7:32 IST
ಬೆಳತೂರಿನ ಮೂರನೇ ಮುಖ್ಯರಸ್ತೆಯ ಕೀರ್ತಿ ರೆಸಿಡೆನ್ಸಿ ಬಳಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು.
ಬೆಳತೂರಿನ ಮೂರನೇ ಮುಖ್ಯರಸ್ತೆಯ ಕೀರ್ತಿ ರೆಸಿಡೆನ್ಸಿ ಬಳಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು.   

–ಶಿವರಾಜ್ ಮೌರ್ಯ

ಕೆ.ಆರ್.ಪುರ: ಮನೆ ಅಂಗಳದಲ್ಲಿ ಕೊಳಚೆ ನೀರು, ರಸ್ತೆಯಲ್ಲೇ ಹರಿಯುವ ಚರಂಡಿ ನೀರು, ಮತ್ತೊಂದೆಡೆ ಶಾಲೆ ಮುಂದೆ ಹೂಳು ತುಂಬಿಕೊಂಡು ಗಬ್ಬು ನಾರುತ್ತಿರುವ ಚರಂಡಿ ವಾಸನೆ.

ಇದು ಮಹದೇವಪುರ ಕ್ಷೇತ್ರದ ಬೆಳತೂರಿನ ಮೂರನೇ ಮುಖ್ಯರಸ್ತೆಯ ಕೀರ್ತಿ ರೆಸಿಡೆನ್ಸಿ ಬಳಿಯ ಸಮಸ್ಯೆಗಳು.

ADVERTISEMENT

ಈ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ರಸ್ತೆ ಮತ್ತು ಮನೆ ಆವರಣದಲ್ಲಿ ಚರಂಡಿ ನೀರು ತುಂಬಿಕೊಂಡು ಕೊಳಚೆ ನೀರಿನ ವಾಸನೆಯಲ್ಲಿ ಬದುಕು ಸಾಗಿಸುವಂತಾಗಿದೆ.

ಕಳೆದ ಎರಡು ವರ್ಷಗಳಿಂದ ರಸ್ತೆಯಲ್ಲಿ ಚರಂಡಿ ನೀರು ಹಾಗೂ ಅಪಾರ್ಟ್‌ಮೆಂಟ್‌ನಿಂದ ಬರುವ ಕಲುಷಿತ ನೀರು ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಸರಾಗವಾಗಿ ಹರಿಯದೆ ರಸ್ತೆಯಲ್ಲಿ ನಿಂತು ಸಾರ್ವಜನಿಕರು ಸಂಚರಿಸಲಾಗದ ಪರಿಸ್ಥಿತಿ ಬಂದೊದಗಿದೆ. ಇದರಿಂದ, ನಿವಾಸಿಗಳು ಮನೆಯಿಂದ ಹೊರಗೆ ಬರಲಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಪರಿಸ್ಥಿತಿ ಕಂಡು ಹಲವು ಕುಟುಂಬಗಳು ಮನೆಯನ್ನು ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯ ನಿವಾಸಿ ಶೋಭಾ ಅಳಲು ತೋಡಿಕೊಂಡರು.

ಕೊಳಚೆ ನೀರಿನಿಂದಾಗಿ ಮಕ್ಕಳು ಕಾಯಿಲೆ ಹಬ್ಬುತ್ತಿವೆ. ಕಣ್ಣಿಗೆ ಕಟ್ಟುವಂತೆ ಇರುವ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಸಮರ್ಪಕ ಚರಂಡಿ ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ದೂರಿದರು.

’ಚರಂಡಿ ನೀರು ಹರಿಯುವ ಪಕ್ಕದಲ್ಲೇ ಖಾಸಗಿ ಶಾಲೆಗಳಿವೆ. ಮಳೆ ಬಂದಾಗ ಹೆಚ್ಚು ನೀರು ತುಂಬಿಕೊಂಡರೂ ಶಾಲೆ ಮಕ್ಕಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ’ ಎಂದು ಸ್ಥಳೀಯ ನಿವಾಸಿ ನಾಗೇಶ್ ದೂರಿದರು.

ಬೆಳತೂರಿನ ಮೂರನೇ ಮುಖ್ಯರಸ್ತೆಯ ಕೀರ್ತಿ ರೆಸಿಡೆನ್ಸಿ ಬಳಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.