ADVERTISEMENT

ಕೆ.ಆರ್.ಪುರ: ಕೆಳಸೇತುವೆಯಲ್ಲೇ ವಾಹನ ಬಿಟ್ಟು ಪ್ರಾಣ ಉಳಿಸಿಕೊಂಡ ಸವಾರರು

ವಿಜಿನಾಪುರ ಕೆಳಸೇತುವೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2023, 16:25 IST
Last Updated 7 ನವೆಂಬರ್ 2023, 16:25 IST
ವಿಜಿನಾಪುರ ರೈಲ್ವೆ ಕೆಳ ಸೇತುವೆಯಲ್ಲಿ ಕಾರು ಮುಳುಗಿರುವುದು
ವಿಜಿನಾಪುರ ರೈಲ್ವೆ ಕೆಳ ಸೇತುವೆಯಲ್ಲಿ ಕಾರು ಮುಳುಗಿರುವುದು   

ಕೆ.ಆರ್.ಪುರ: ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ವಿಜಿನಾಪುರದಿಂದ ಟಿನ್ ಫ್ಯಾಕ್ಟರಿ ಕಡೆಗೆ ಸಂಪರ್ಕ ಕಲ್ಪಿಸುವ ವಿಜಿನಾಪುರದ ಎಫ್‌ಸಿಐ ಗೋದಾಮು ಬಳಿಯ ರೈಲ್ವೆ ಕೆಳಸೇತುವೆ ಜಲಾವೃತಗೊಂಡು ವಾಹನ ಸವಾರರು ಪರದಾಡಿದರು.

ಮಳೆ ನೀರು ಶೇಖರಣೆಗೊಂಡು ಕೇಳಸೇತುವೆ ಹೊಳೆಯಂತಾದ ಪರಿಣಾಮ ರೈಲ್ವೆ ಕೆಳಸೇತುವೆಯಲ್ಲಿ ನಾಲ್ಕು ಅಡಿಗೂ ಹೆಚ್ಚು ಮಳೆ ನೀರು ಸಂಗ್ರಹಗೊಂಡು ಒಂದು ಬೈಕ್ ಮತ್ತು ಕಾರು ನೀರಿನಲ್ಲಿ ಸಿಲುಕಿಕೊಂಡಿದ್ದವು. ಪ್ರಾಣ ಉಳಿಸಿಕೊಳ್ಳಲು ವಾಹನ ಸವಾರರು ಸ್ಥಳದಲ್ಲಿಯೇ ವಾಹನ ಬಿಟ್ಟು ಹೊರಬಂದರು.

ರೈಲ್ವೆ ಸೇತುವೆ ಕೆಳಗೆ ಅಪಾರ ಪ್ರಮಾಣದ ನೀರು ತುಂಬಿಕೊಂಡು ಸರಗವಾಗಿ ಹರಿಯದೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಂಗಳವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಅಗ್ನಿ ಶಾಮಕ ದಳದ ಸಿಬ್ಬಂದಿ ಮೋಟಾರ್  ಮೂಲಕ ನೀರು ಹೊರಹಾಕಿದರು. ಆದರೂ ನೀರಿನ ಪ್ರಮಾಣ ಕಡಿಮೆಯಾಗದೇ ವಾಹನ ಸವಾರರಿಗೆ ಈ ರಸ್ತೆಯಲ್ಲಿ ಸಂಚಾರ ಸಾಧ್ಯವಾಗದೆ ಬೇರೆ ಮಾರ್ಗದ ಮೂಲಕ ತೆರಳಿದವು. 

ADVERTISEMENT

ಹಲವು ವರ್ಷಗಳಿಂದ ಈ ಸಮಸ್ಯೆ ಇದೆ. ಪ್ರತಿ ಸಾರಿ ಮಳೆ ಬಂದಾಗ ರೈಲ್ವೆ ಸೇತುವೆ ಬಳಿ ಪ್ರವಾಹ ಸೃಷ್ಟಿಯಾಗುತ್ತದೆ. ನೀರು ಸಂಗ್ರಹಗೊಂಡು ತೊಂದರೆ ಆದಾಗ ಮಾತ್ರ ಅ ಕ್ಷಣಕ್ಕೆ ಬಿಬಿಎಂಪಿ ಅಧಿಕಾರಿಗಳು ಕಾಟಚಾರಕ್ಕೆ ನೀರು ತೆರವುಗೊಳಿಸಿ ಕೈತೊಳೆದುಕೊಳ್ಳುತ್ತಾರೆ. ಕೆಳ ಸೇತುವೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಮಳೆ ನೀರು ಚರಂಡಿ ಮೂಲಕ ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆ ನೀರು ನಾಲ್ಕು ಅಡಿಗೂ ಹೆಚ್ಚು ಶೇಖರಣೆಗೊಳ್ಳುತ್ತದೆ ಎಂದು ವಾಹನ ಸವಾರ ಪ್ರದೀಪ್ ಹೇಳಿದರು.

ಕೆಳಸೇತುವೆ ಸಂಪರ್ಕವು ವಿಜಿನಾಪುರಪುರದಿಂದ ಹೆಬ್ಬಾಳ, ಮಾರತ್‌ಹಳ್ಳಿ, ವೈಟ್‌ಫೀಲ್ಡ್, ಹಲಸೂರು ಕಡೆಗೆ ಸಂಪರ್ಕ ಹೊಂದಿದೆ. ಸಾವಿರಾರು ವಾಹನ ಸವಾರರು ಈ ಕೆಳಸೇತುವೆಯನ್ನೇ ನೆಚ್ಚಿಕೊಂಡಿದ್ದಾರೆ. ಮಳೆ ಬಂದಾಗಲೆಲ್ಲ ಕೆಳಸೇತುವೆ ಜಲಾವೃತಗೊಂಡು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಸೋಮವಾರ ರಾತ್ರಿ ಸುರಿದ ಮಳೆಗೆ ವಾಹನ ಸವಾರರು ವಾಹನಗಳನ್ನು ನಡುನೀರಿನಲ್ಲಿ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ದಾರೆ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿಕೊಂಡರು ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯ ರಮೇಶ್ ದೂರಿದರು.

ಬೆಳ್ಳಂದೂರು, ವರ್ತೂರು, ಮಾರತ್‌ಹಳ್ಳಿ, ವೈಟ್‌ಫೀಲ್ಡ್ ಭಾಗದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು.

ಕರಿಯಮ್ಮ ಅಗ್ರಹಾರದ ಬಳಿ ರಸ್ತೆಯು ಜಲಾವೃತ್ತವಾಗಿದ್ದು ವಾಹನ ಸವಾರರು ಹೈರಾಣರಾದರು. ಪಾಣತ್ತೂರು ಬಳಗೆರೆ ರಸ್ತೆಯಲ್ಲಿ ಗುಂಡಿಗಳು ಬಿದ್ದು ಅದರಲ್ಲಿ ಮಳೆ ನೀರು ಆವರಿಸಿದ್ದರಿಂದ ವಾಹನಗಳು ಸಾಲುಸಾಲಾಗಿ ನಿಂತಿದ್ದವು.

ವಿಜಿನಾಪುರ ಕೆಳ ಸೇತುವೆಯಲ್ಲಿ ನೀರು ತುಂಬಿಕೊಂಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.