ADVERTISEMENT

ಸ್ಥಳೀಯ ಸಮಸ್ಯೆಗಳೇ ಮತ ಸೆಳೆಯುವ ದಾಳ

ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಮತಯಾಚನೆ

ಸಂತೋಷ ಜಿಗಳಿಕೊಪ್ಪ
Published 14 ಏಪ್ರಿಲ್ 2019, 20:10 IST
Last Updated 14 ಏಪ್ರಿಲ್ 2019, 20:10 IST
ವಿದ್ಯಾರಣ್ಯಪುರ ಸಮೀಪದ ತಿಂಡ್ಲು ವೃತ್ತದಲ್ಲಿ ಕೃಷ್ಣ ಬೈರೇಗೌಡ ಅವರು ಮತದಾರರತ್ತ ಕೈ ಬೀಸಿದರು      ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌
ವಿದ್ಯಾರಣ್ಯಪುರ ಸಮೀಪದ ತಿಂಡ್ಲು ವೃತ್ತದಲ್ಲಿ ಕೃಷ್ಣ ಬೈರೇಗೌಡ ಅವರು ಮತದಾರರತ್ತ ಕೈ ಬೀಸಿದರು      ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಸುಡು ಬಿಸಿಲಿನಲ್ಲಿ ಶರವೇಗದ ಸಂಚಾರ. ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಹಾಗೂ ಮತ
ದಾರರನ್ನು ಉದ್ದೇಶಿಸಿ ಭಾಷಣ. ಚಿಕ್ಕವರಿಗೆ ಹಸ್ತಲಾಘವ, ಹಿರಿಯರಿಗೆ ಶಿರಬಾಗಿ ನಮಸ್ಕಾರ.

ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಭಾನುವಾರ ನಡೆಸಿದ ‘ಮತಬೇಟೆ’ಯ ವೈಖರಿ ಇದು.

ಚುನಾವಣೆ ಪ್ರಚಾರದಿಂದ ದಣಿದು ಶನಿವಾರ ತಡವಾಗಿ ಮಲಗಿದ್ದ ಅಭ್ಯರ್ಥಿ ಭಾನುವಾರ ಬೆಳಿಗ್ಗೆ ಎದ್ದಿದ್ದು 6 ಗಂಟೆಗೆ. ನಿತ್ಯ ಕರ್ಮಗಳನ್ನು ಮುಗಿಸಿ ತಿಂಡಿ ತಿಂದು ಊಟದ ಡಬ್ಬಿಯೊಂದಿಗೆ ಸಂಜೀವಿನಿ ನಗರದಲ್ಲಿರುವ ಮನೆಯಿಂದ ಹೊರಬಿದ್ದಿದ್ದು 8.15 ಗಂಟೆಗೆ. ದಾರಿಯುದ್ದಕ್ಕೂ ಕಾರಿನಲ್ಲೇ ಕುಳಿತು ಮತದಾರರತ್ತ ಕೈ ಬೀಸಿ ಮುಂದಕ್ಕೆ ಸಾಗಿದರು. ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತ ಸೆಳೆಯುವ ಪ‍್ರಯತ್ನ ನಡೆಸಿದರು.

ADVERTISEMENT

ನಾಗಶೆಟ್ಟಿಹಳ್ಳಿಯ ಭದ್ರಪ್ಪ ಬಡಾವಣೆಗೆ ಬೆಳಿಗ್ಗೆ 9.20ಕ್ಕೆ ಬಂದ ಕೃಷ್ಣ ಬೈರೇಗೌಡ ಅವರನ್ನು ಕಾರ್ಯಕರ್ತರು, ತಮಟೆ ಬಾರಿಸಿ ಪಟಾಕಿ ಸಿಡಿಸಿ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಪಕ್ಷದ ಮುಖಂಡ ಎಂ.ಆರ್.ಸೀತಾರಾಮ್ ಜೊತೆ ಪ್ರಚಾರ ಆರಂಭಿಸಿದ ಅವರು, ಹದಗೆಟ್ಟಿರುವ ಕೊಡಿಗೇಹಳ್ಳಿ ಮುಖ್ಯರಸ್ತೆ ಬಗ್ಗೆ ಪ್ರಸ್ತಾಪಿಸಿದರು. ‘ಕೇಂದ್ರ ಸರ್ಕಾರದ ಅಧೀನದ ಗೇಲ್‌ ಸಂಸ್ಥೆಯವರು ನೈಸರ್ಗಿಕ ಅಡುಗೆ ಅನಿಲ ಪೂರೈಕೆಯ ಕೊಳವೆ ಮಾರ್ಗ ಅಳವಡಿಸುತ್ತಿದ್ದು, ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಅದು ರಸ್ತೆ ದುರಸ್ತಿಗೆ ಅಡ್ಡಿಯಾಗಿದೆ’ ಎಂದು ಆರೋಪಿಸಿದರು.

ತೆರೆದ ವಾಹನದಲ್ಲಿ ಮೆರವಣಿಗೆ ಹೊರಟರು. ಮುಖಂಡರು ಹಾಗೂ ಕಾರ್ಯಕರ್ತರು ಅವರನ್ನು ಹಿಂಬಾಲಿಸಿದರು.ಕೊಡಿಗೇಹಳ್ಳಿ ವೃತ್ತದಲ್ಲಿ ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇತ್ತೀಚೆಗೆ ಕೊಡಿಗೇಹಳ್ಳಿ ಕೆಳಸೇತುವೆ ವಿಚಾರವನ್ನೂ ಮತ ಯಾಚನೆಗೆ ದಾಳವಾಗಿ ಬಳಸಿದರು.

‘ಜನರ ಸಂಚಾರಕ್ಕೆ ಅನುಕೂಲವಾಗಲೆಂದು ಕೊಡಿಗೇಹಳ್ಳಿ ಕೆಳಸೇತುವೆ ನಿರ್ಮಿಸಲಾಗಿದೆ. ಅದು ಉಪ
ಯೋಗಕ್ಕೆ ಲಭ್ಯವಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಅಷ್ಟಕ್ಕೇ ಬಿಜೆಪಿ
ಯವರು, ಚುನಾವಣಾ ಆಯೋಗಕ್ಕೆ ದೂರು ನೀಡಿ ಅಮಾಯಕರ ಮೇಲೆ ಎಫ್‌ಐಆರ್‌ ದಾಖಲಾಗುವಂತೆ ಮಾಡಿದ್ದಾರೆ. ಜನರಿಗೆ ಒಳ್ಳೆಯದಾಗಲಿ ಎಂದು ಕೆಳಸೇತುವೆ ನಿರ್ಮಿಸಿದ್ದು ತಪ್ಪೇ..’ ಎಂದು ಪ್ರಶ್ನಿಸಿದರು.

‘ಕೆಳಸೇತುವೆ ನಿರ್ಮಿಸಿದ್ದೇ ಜನರ ಬಳಕೆಗೆ. ಬಿಜೆಪಿಯವರು ಅದಕ್ಕೂ ಅವಕಾಶ ನೀಡುತ್ತಿಲ್ಲ. ರಸ್ತೆ ವಿಸ್ತರಣೆ ವೇಳೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೊಡಿಸಿದಾಗಲೂ ಬಿಜೆಪಿಯವರು, ಆ ಮೊತ್ತ ಜಾಸ್ತಿ ಆಯಿತು ಎಂದು ಕೇಸ್ ಹಾಕಿದ್ದರು’ ಎಂದರು.

ವಿದ್ಯಾರಣ್ಯಪುರ ಹಾಗೂ ಸಂಜೀವಿನಿನಗರದಲ್ಲಿ ಮತ ಯಾಚಿಸಿದ ಬಳಿಕ ಬ್ಯಾಟರಾಯನಪುರಕ್ಕೆ ಹೊರಟರು. ಬಳ್ಳಾರಿ ರಸ್ತೆಯಲ್ಲಿರುವ ರಾಮಮಂದಿರಕ್ಕೆ ಭೇಟಿ ನೀಡಿದರು. ಹಲವು ಕಡೆ ಬಹಿರಂಗ ಸಭೆಗಳಲ್ಲಿ ಪಾಲ್ಗೊಂಡರು.ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಿಲ್ಲ.

ಕಾರಿನಲ್ಲೇ ಉಳಿದ ಊಟ: ಹಸಿವು, ದಣಿವು ಲೆಕ್ಕಿಸದೇ ಕೃಷ್ಣ ಬೈರೇಗೌಡ ಪ್ರಚಾರ ಮಾಡಿದರು. ಬೆಳಿಗ್ಗೆ ಮನೆಯಿಂದ ತಂದಿದ್ದ ಊಟದ ಡಬ್ಬಿ ರಾತ್ರಿವರೆಗೂ ಕಾರಿನಲ್ಲೇ ಇತ್ತು.

‘ಪ್ರಚಾರ ಶುರುವಾದಾಗಿನಿಂದ ಸಾಹೇಬ್ರು ಮಧ್ಯಾಹ್ನ ಕಾರಿನಲ್ಲೇ ಊಟ ಮಾಡುತ್ತಿದ್ದಾರೆ. ಭಾನುವಾರ 20ಕ್ಕೂ ಹೆಚ್ಚು ಕಡೆ ಸಭೆ ಇಟ್ಟುಕೊಂಡಿದ್ದರು. ಹೀಗಾಗಿ, ಊಟ ಮಾಡಲು ಸಮಯವೇ ಸಿಗಲಿಲ್ಲ’ ಎಂದು ಅವರ ಆಪ್ತರೊಬ್ಬರು ತಿಳಿಸಿದರು.‌

‘ಎಂಎಲ್‌ಎ, ಕಾರ್ಪೊರೇಟರ್ ನಾನೇ’

‘ನಾನು ಸಂಸದನಾಗಿ ಆಯ್ಕೆಯಾದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುವವರು ಯಾರು ಎಂಬ ಬಗ್ಗೆ ಚಿಂತಿಸಬೇಡಿ. ಎಂ.ಪಿ. ಆದರೂ ಈ ಬ್ಯಾಟರಾಯನಪುರ ಕ್ಷೇತ್ರಕ್ಕೆ ಎಂಎಲ್‌ಎ ಹಾಗೂ ಕಾರ್ಪೊರೇಟರ್‌ನಂತೆ ಸದಾಕಾಲ ಕೆಲಸ ಮಾಡುತ್ತೇನೆ. ನನಗೆ ರಾಜಕೀಯ ಭವಿಷ್ಯ ನೀಡಿದ ನಿಮ್ಮ ಋಣವನ್ನು ಎಷ್ಟು ದುಡಿದರೂ ತೀರಿಸಲಾಗದು’ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಕಾರಿನಲ್ಲೇ ಉಳಿದ ಊಟ

ಹಸಿವು, ದಣಿವು ಲೆಕ್ಕಿಸದೇ ಕೃಷ್ಣ ಬೈರೇಗೌಡ ಪ್ರಚಾರ ಮಾಡಿದರು. ಬೆಳಿಗ್ಗೆ ಮನೆಯಿಂದ ತಂದಿದ್ದ ಊಟದ ಡಬ್ಬಿ ರಾತ್ರಿವರೆಗೂ ಕಾರಿನಲ್ಲೇ ಇತ್ತು.

‘ಪ್ರಚಾರ ಶುರುವಾದಾಗಿನಿಂದ ಸಾಹೇಬ್ರು ಮಧ್ಯಾಹ್ನ ಕಾರಿನಲ್ಲೇ ಊಟ ಮಾಡುತ್ತಿದ್ದಾರೆ. ಭಾನುವಾರ ರಜೆ ಇರುವುದರಿಂದ 20ಕ್ಕೂ ಹೆಚ್ಚು ಕಡೆ ಸಭೆ ಇಟ್ಟುಕೊಂಡಿದ್ದರು. ಅಲ್ಲೆಲ್ಲ ಓಡಾಡುತ್ತ ಊಟ ಮಾಡಲು ಸಮಯವೇ ಸಿಗಲಿಲ್ಲ’ ಎಂದು ಅವರ ಆಪ್ತರೊಬ್ಬರು ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.