ADVERTISEMENT

‘ಕೃಷ್ಣೆಯಿಂದ ಕಾವೇರಿವರೆಗೆ’ ಉತ್ಸವ: BIC ಜೊತೆ ಅಜೀಂ ಪ್ರೇಮ್‌ಜಿ ವಿವಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 16:10 IST
Last Updated 28 ಅಕ್ಟೋಬರ್ 2025, 16:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ನ.1 ಮತ್ತು ನ.2ರಂದು ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ‘ಕೃಷ್ಣೆಯಿಂದ ಕಾವೇರಿವರೆಗೆ’ ಶೀರ್ಷಿಕೆಯಡಿ ಉತ್ಸವ ಹಮ್ಮಿಕೊಂಡಿದೆ.

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬಿಐಸಿ ಸಹಯೋಗದಲ್ಲಿ ವಿಶ್ವವಿದ್ಯಾಲಯವು ಈ ಉತ್ಸವ ಆಯೋಜಿಸಿದೆ. ಎರಡು ದಿನಗಳ ಉತ್ಸವದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ನ.1ರಂದು ಬೆಳಿಗ್ಗೆ 10 ಗಂಟೆಗೆ ಈ ಉತ್ಸವದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. 

ಜಾನಪದ ಕಲಾ ಪ್ರದರ್ಶನ, ಗಾಯನ, ಪುಸ್ತಕ ಬಿಡುಗಡೆ, ಉಪನ್ಯಾಸ, ವಿಚಾರಸಂಕಿರಣ, ಕಾರ್ಯಾಗಾರ, ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ಹಲವು ವೈವಿಧ್ಯವನ್ನು ಈ ಉತ್ಸವ ಒಳಗೊಂಡಿರಲಿದೆ. ಕರ್ನಾಟಕದಲ್ಲಿ ಹರಿಯುತ್ತಿರುವ ನದಿಗಳಲ್ಲಿ ಕೃಷ್ಣಾ ಮತ್ತು ಕಾವೇರಿ ಪ್ರಮುಖವಾಗಿವೆ. ಎರಡೂ ನದಿಗಳು ಈ ರಾಜ್ಯದ ವಿವಿಧ ಭೂ ಭಾಗಗಳಲ್ಲಿ ಹರಿಯುತ್ತಿರುವ ಹಾಗೆಯೇ, ಉತ್ಸವವೂ ಕರ್ನಾಟಕದ ವಿವಿಧ ಸಂಸ್ಕೃತಿ ಮತ್ತು ಭಾಷೆಗಳೊಂದಿಗೆ ಕೊಂಡಿ ಬೆಸೆಯುವ ಆಶಯ ಹೊಂದಿದೆ ಎಂದು ಫೌಂಡೇಷನ್‌ನ ಮುಖ್ಯ ಸಂವಹನಾಧಿಕಾರಿ ಸುಧೀಶ್ ವೆಂಕಟೇಶ್ ತಿಳಿಸಿದ್ದಾರೆ. 

ADVERTISEMENT

ಚಿಕ್ಕಮಕ್ಕಳಿಂದ ಎಲ್ಲ ವಯೋಮಾನದವರನ್ನೂ ಈ ಉತ್ಸವ ರಂಜಿಸುವ ವಿಶ್ವಾಸವಿದೆ. ಹಿಂದೂಸ್ತಾನಿ ಸಂಗೀತದ ಜತೆಗೆ, ಕನ್ನಡ ಕಲಿಕೆಯಂತಹ ಚಟುವಟಿಕೆಗಳೂ ನಡೆಯಲಿವೆ. ಸಾರ್ವಜನಿಕರಿಗೆ ಪ್ರವೇಶ ಉಚಿತ ಎಂದು ಫೌಂಡೇಷನ್‌ನ ಎಸ್.ವಿ. ಮಂಜುನಾಥ್ ವಿವರಿಸಿದರು.

ಮೊದಲ ದಿನ ನಡೆಯುವ ‘ಮುಂಜಾನೆ ರಾಗಗಳು’ ಕಾರ್ಯಕ್ರಮದಲ್ಲಿ ವಿನಾಯಕ್ ತೊರವಿ, ವ್ಯಾಸಮೂರ್ತಿ ಕಟ್ಟಿ ಮತ್ತು ಗುರುಮೂರ್ತಿ ವೈದ್ಯ‌ ಅವರು ಹಿಂದೂಸ್ತಾನಿ ಸಂಗೀತ ಪ್ರಸ್ತುತಪಡಿಸುತ್ತಾರೆ. ರಾಜ್ಯದಲ್ಲಿರುವ ಸ್ಮಾರಕಗಳ ಪರಿಚಯ, ಪಾರಂಪರಿಕ ಮಣೆಯಾಟ, ಪಾರಂಪರಿಕ ಕಲಾ ಪ್ರದರ್ಶನ ಉತ್ಸವದ ಮೆರಗು ಹೆಚ್ಚಿಸಲಿದೆ ಎಂದು ಬಿಐಸಿ ನಿರ್ದೇಶಕ ವಿಕ್ರಮ್‌ ಭಟ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.