
ಬೆಂಗಳೂರು: ‘ಮೆಂಟಲ್ ತರ ಮಾತಾಡ್ತೀರಲ್ರೀ, ನನಗೆ ಈಗ ಪಿತ್ತ ನೆತ್ತಿಗೇರುತ್ತೆ...’
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ. ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ನಮ್ಮ ಮೆಟ್ರೊ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿದ ಅವರು, ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
‘ಒಂದು ಪಿಲ್ಲರ್ ನಿರ್ಮಿಸಲು ಎರಡು ತಿಂಗಳು ಸಾಕು, ಎರಡು ವರ್ಷ ಏಕೆ ತೆಗೆದುಕೊಳ್ಳುತ್ತಿದ್ದೀರಿ’ ಎಂದು ಕೃಷ್ಣಬೈರೇಗೌಡ ಪ್ರಶ್ನಿಸಿದರು. ‘ಅಷ್ಟು ಬೇಗ ಆಗೊಲ್ಲ ಸರ್’ ಎಂದು ಅಧಿಕಾರಿ ಉತ್ತರಿಸಿದರು. ಆಗ ಸಿಟ್ಟಾದ ಕೃಷ್ಣಬೈರೇಗೌಡ, ‘ಎಷ್ಟು ಕೆಲಸ ಮಾಡಿದ್ದೀರಿ, ನೀವ್ಯಾರ್‍ರಿ, ಏನೂ ಗೊತ್ತಿಲ್ಲ. ಮೆಂಟಲ್ ತರ ಮಾತಾಡಿ, ನನ್ನ ಪಿತ್ತ ನೆತ್ತಿಗೇರಿಸುತ್ತಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು.
‘ನಮ್ಮ ಮೆಟ್ರೊ ಕಾಮಗಾರಿಗೆ ಸ್ವಲ್ಪ ರಸ್ತೆಯಲ್ಲ, ಬಹುತೇಕ ತೆಗೆದುಕೊಂಡಿದ್ದೀರಿ. ಇದರಿಂದ ನಾಗರಿಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಸಂಚಾರ ದಟ್ಟಣೆಯಾದರೂ ನೀವು ಕ್ರಮ ಕೈಗೊಳ್ಳುವುದಿಲ್ಲ. ಎರಡು ತಿಂಗಳಲ್ಲಿ ಆಗಬೇಕಾದ ಕೆಲಸವನ್ನು ಎರಡು–ಮೂರು ವರ್ಷ ಮಾಡುತ್ತಿದ್ದೀರಿ. ಬೇಗ ಕೆಲಸ ಮುಗಿಸಲು ನಿಮಗೇನು ಸಮಸ್ಯೆ’ ಎಂಬ ಸಚಿವರ ಪ್ರಶ್ನೆಗೆ ಅಧಿಕಾರಿಗಳು ನಿರುತ್ತರರಾದರು.
‘ನಾಗವಾರ, ವೀರಣ್ಣ, ಕೊಡಿಗೆಹಳ್ಳಿ ಜಂಕ್ಷನ್ ಸೇರಿದಂತೆ ಮೆಟ್ರೊ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ಬೇಡವಾದದ್ದನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ತಾಕೀತು ಮಾಡಿದರು.
ಹೊರವರ್ತುಲ ಸರ್ವಿಸ್ ರಸ್ತೆಯ ಎರಡೂ ಬದಿಗಳನ್ನು ಮುಚ್ಚಿರುವುದು ಗಮನಿಸಿ, ಕನಿಷ್ಠ ಒಂದು ಪಥವನ್ನು ಸಂಚಾರಕ್ಕೆ ತೆರೆಯಬೇಕು. ರಸ್ತೆ ಯೋಗ್ಯ ಸ್ಥಿತಿಯಲ್ಲಿ ಇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಸ್ಟೀಮ್ ಮಾಲ್ ಬಳಿ ಸರ್ವಿಸ್ ರಸ್ತೆಗೆ ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆ ಕಲ್ಪಿಸಲು, ಎರಡೂ ಬದಿಗಳಲ್ಲಿ ಬಸ್ ಬೇ ವ್ಯವಸ್ಥೆಗೆ ಅಗತ್ಯವಾದ ಜಾಗ ಒದಗಿಸಲು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೆಬ್ಬಾಳದಿಂದ ಬಾಗಲೂರು ಕ್ರಾಸ್‌ವರೆಗೆ ಉತ್ತರ ನಗರ ಪಾಲಿಕೆ, ರಾಷ್ಟ್ರೀಯ ಹೆದ್ದಾರಿ ಮತ್ತು ಮೆಟ್ರೊ ಸಂಸ್ಥೆಗಳು ಒಟ್ಟಾಗಿ ಸ್ವಚ್ಛತಾ ಅಭಿಯಾನ ಕೈಗೊಳ್ಳುವಂತೆ ಆದೇಶಿಸಿದರು.
ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್, ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ಉಪಸ್ಥಿತರಿದ್ದರು.
ಮೆಟ್ರೊ ಅಧಿಕಾರಿಗಳಿಗೆ ಕೇಳಿದ ಪ್ರಶ್ನೆಗಳು
ಒಂದು ಮೆಟ್ರೊ ಪಿಲ್ಲರ್ ಹಾಕಲು ಎರಡು ತಿಂಗಳು ಸಾಕು ಎರಡು ವರ್ಷ ಏಕೆ?
ಮೆಟ್ರೊ ಕಾಮಗಾರಿ ಶೀಘ್ರ ಮುಗಿಸಲು ಇರುವ ಸಮಸ್ಯೆ ಏನು? * ಕಾಮಗಾರಿ ತಡವಾಗುತ್ತಿರುವುದರಿಂದ ಜನರಿಗಾಗುತ್ತಿರುವ ಸಮಸ್ಯೆ ನಿಮಗೆ ಗೊತ್ತೆ?
ಮೆಟ್ರೊ ಕಾಮಗಾರಿಯಿಂದ ರಸ್ತೆ ಗುಣಮಟ್ಟ ಕ್ಷೀಣಿಸುತ್ತಿದೆ ನಿಮಗೆ ಇದರ ಅರಿವಿದೆಯೇ?
ಟ್ರಾಫಿಕ್ ಕಿರಿಕಿರಿಯಿಂದ ಜನರು ಬೇಸತ್ತಿರುವುದು ಗೊತ್ತಿದೆಯೇ? * ಮೆಟ್ರೊ ಕಾಮಗಾರಿ ನಂತರ ಅನಗತ್ಯ ವಸ್ತುಗಳ ವಿಲೇವಾರಿ ಮಾಡುತ್ತಿಲ್ಲ ಏಕೆ?
ಮಳೆ ಬಂದರೆ ನೀರು ಹರಿಯಲು ಏಕೆ ವ್ಯವಸ್ಥೆ ಮಾಡಿಲ್ಲ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.