ADVERTISEMENT

ಬಿಡಿಎ ಎಇಇ ಕೃಷ್ಣಲಾಲ್‌ ನಾಪತ್ತೆ!

​ಪ್ರಜಾವಾಣಿ ವಾರ್ತೆ
Published 30 ಮೇ 2019, 20:16 IST
Last Updated 30 ಮೇ 2019, 20:16 IST

ಬೆಂಗಳೂರು: ‘ಅಭಿವೃದ್ಧಿ ಹಕ್ಕು ವಂಚನೆ (ಟಿಡಿಆರ್‌) ಪ್ರಕರಣ’ದ ಪ್ರಮುಖ ಆರೋಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಉಸ್ತುವಾರಿ ಸಹಾಯಕ ಎಂಜಿನಿಯರ್‌ ಕೃಷ್ಣಲಾಲ್‌ ನಾಪತ್ತೆಯಾಗಿದ್ದು, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ.

ಕೃಷ್ಣಲಾಲ್‌ ಅವರ ಮಧ್ಯಂತರ ಜಾಮೀನನ್ನು ವಿಶೇಷ ಲೋಕಾಯುಕ್ತ ನ್ಯಾಯಾಲಯವು ಸೋಮವಾರ ರದ್ದುಪಡಿಸಿದ ಕ್ಷಣದಿಂದ ಅವರು ತನಿಖಾಧಿಕಾರಿಗಳಿಗೆ ಸಿಕ್ಕಿಲ್ಲ. ಇದರಿಂದಾಗಿ ತನಿಖೆ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಂತರ ಜಾಮೀನು ಮಂಜೂರು ಮಾಡುವಾಗ ಕೋರ್ಟ್‌ ಹಾಕಿದ್ದ ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಕೃಷ್ಣಲಾಲ್‌ ಜಾಮೀನು ರದ್ದುಪಡಿಸಲಾಗಿದೆ.ಎಸಿಬಿ ಅಧಿಕಾರಿಗಳ ತಂಡ ಮಂಗಳವಾರ ಬೆಳಿಗ್ಗೆಯಿಂದಲೇ ಎಇಇ ಮನೆ, ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಿಗೆ ಅಲೆದಾಡುತ್ತಿದೆ.

ADVERTISEMENT

ಇನ್‌ಸ್ಪೆಕ್ಟರ್‌ ನೇತೃತ್ವದ ತಂಡ ಅವರ ಹುಟ್ಟೂರು ಹರಪನಹಳ್ಳಿಗೂ ತೆರಳಿದೆ. ನಗರದ ಲಾಡ್ಜ್‌ಗಳಲ್ಲೂ ಶೋಧಿಸಲಾಗುತ್ತಿದೆ. ಈ ಮಧ್ಯೆ, ವಿಶೇಷ ಲೋಕಾಯುಕ್ತ ನ್ಯಾಯಾಲಯ ತಮ್ಮ ಮಧ್ಯಂತರ ಜಾಮೀನು ರದ್ದುಪಡಿಸಿರುವ ಕ್ರಮವನ್ನು ಪ್ರಶ್ನಿಸಿ ಕೃಷ್ಣಲಾಲ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಬಗೆಗಿನ ಪ್ರತಿಕ್ರಿಯೆಗೆ ಕೃಷ್ಣಲಾಲ್‌ ಅವರನ್ನು ಸಂಪರ್ಕಿಸಲು ‍‘ಪ್ರಜಾವಾಣಿ’ ಪ್ರಯತ್ನಿಸಿದಾಗ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು. ‘ಎಇಇ ಎಲ್ಲಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ’ ಎಂದು ಅವರ ಕುಟುಂಬದ ಸದಸ್ಯರೊಬ್ಬರು ಸ್ಪಷ್ಟಪಡಿಸಿದರು

ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡಿರುವ ಕವಡೇನಹಳ್ಳಿಯ ಜಮೀನೊಂದರ ಟಿಡಿಆರ್‌ ಹಕ್ಕು ವರ್ಗಾವಣೆ‍ಪ್ರಕರಣದಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣದಲ್ಲಿ ಕೃಷ್ಣಲಾಲ್‌ ಪ್ರಮುಖ ಆರೋಪಿ. ಪ್ರಕರಣದ ತನಿಖೆಗೆ ಆರೋಪಿ ಅಧಿಕಾರಿ ಅಗತ್ಯ ಸಹಕಾರ ನೀಡದಿರುವುದರಿಂದ ಜಾಮೀನು ರದ್ದುಪಡಿಸಲಾಗಿದೆ.

ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಎಸಿಬಿ ಅಧಿಕಾರಿಗಳು ಕೃಷ್ಣಲಾಲ್‌ ಹಾಗೂ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿ ಕೆಲವು ದಾಖಲೆ ವಶಪಡಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.