ADVERTISEMENT

ಕೃತಿಕಾ ರೆಡ್ಡಿ ಕೊಲೆ ಪ್ರಕರಣ: ಮರಣೋತ್ತರ ಪರೀಕ್ಷೆ ನೋಡಲು ಹಟ ಹಿಡಿದಿದ್ದ...

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 15:45 IST
Last Updated 19 ಅಕ್ಟೋಬರ್ 2025, 15:45 IST
ಕೃತಿಕಾ ರೆಡ್ಡಿ, ಮಹೇಂದ್ರ ರೆಡ್ಡಿ
ಕೃತಿಕಾ ರೆಡ್ಡಿ, ಮಹೇಂದ್ರ ರೆಡ್ಡಿ   

ಬೆಂಗಳೂರು: ‘ಮಗಳು ಕೃತಿಕಾ ರೆಡ್ಡಿ ಕೊಲೆಗೆ ಬಳಸಿದ್ದ ಅನಸ್ತೇಶಿಯಾವನ್ನು ಆರೋಪಿ ಮಹೇಂದ್ರ ರೆಡ್ಡಿ ತನ್ನ ಸಹೋದರನಿಗೆ ಸೇರಿದ ಔಷಧ ಅಂಗಡಿಯಿಂದಲೇ ತಂದಿರಬಹುದು. ಪೊಲೀಸ್‌ ತನಿಖೆಯಿಂದ ಸತ್ಯ ಹೊರ ಬರಲಿದೆ’ ಎಂದು ಮೃತರ ತಾಯಿ ಸೌಜನ್ಯಾ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ವೈದ್ಯನಾಗಿರುವುದರಿಂದ ತಾನು ಮರಣೋತ್ತರ ಪರೀಕ್ಷೆ ನೋಡಬೇಕು ಎಂದು ಅಳಿಯ ಹಟ ಹಿಡಿದಿದ್ದರು. ಕಳೆದ ವರ್ಷ ಅಕ್ಟೋಬರ್‌ನಿಂದಲೇ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದ ವಿಚಾರ ಗೊತ್ತಾಗಿದೆ. ಮಗಳು ಆಗಾಗ್ಗೆ ಮನೆಗೆ ಬರುತ್ತಿದ್ದಳು. ಏಪ್ರಿಲ್ 21ರಂದು ಮಗಳಿಗೆ ಅವರ ಮನೆಯಲ್ಲಿ ಚಿಕಿತ್ಸೆ ನೀಡಿ, 22 ರಂದು ನಮ್ಮ ಮನೆಗೆ ಕರೆದುಕೊಂಡು ಬಂದರು. ಬರುವಾಗಲೇ ಐವಿ ಡ್ರಿಪ್ಸ್‌ ಹಾಕಿಕೊಂಡು ಬಂದಿದ್ದರು’ ಎಂದರು.

‘23ರ ರಾತ್ರಿ ಮಗಳ ಜತೆ ಊಟ ಮಾಡಿದ್ದೇವು. ಮರುದಿನ ಬೆಳಿಗ್ಗೆ 7.30ಕ್ಕೆ ಅಳಿಯ ಕೊಠಡಿಯಿಂದ ಕಿರುಚಿಕೊಂಡರು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿರುವ ವಿಚಾರ ಗೊತ್ತಾಯಿತು. ಮಗಳಿಗೆ ಆರೋಗ್ಯ ಸಮಸ್ಯೆ ಇರಲಿಲ್ಲ. ಸಂಬಂಧಿಕರು ನೋಡಿದ ಹುಡುಗನ ಜೊತೆ ಮದುವೆ ಮಾಡಿದ್ದೆವು. ಮದುವೆಯಾಗಿ ಹನ್ನೊಂದು ತಿಂಗಳು ಮಾತ್ರ ಅಳಿಯ ಜೊತೆಗೆ ಇದ್ದರು. ಸಣ್ಣ ಆರೋಗ್ಯ ಸಮಸ್ಯೆಗೆ ಪ್ರಾಣ ತೆಗಿಯುತ್ತಾರಾ ? ಪ್ರಾಣ ತೆಗೆಯುವ ಅಧಿಕಾರ ಯಾರು ಕೊಟ್ಟರು?’ ಎಂದು ಪ್ರಶ್ನಿಸಿದರು.  

ADVERTISEMENT

‘ಆರೋಪಿಯ ಸಹೋದರ ಕೂಡ ಹುಡುಗಿಗೆ ಮೋಸ ಮಾಡಿದ ಆರೋಪವಿದೆ. ಪ್ರಾಣ ಉಳಿಸುವವರೇ ಪ್ರಾಣ ತೆಗೆಯುವ ಕೆಲಸ ಮಾಡಿದ್ದಾರೆ. ಆರೋಪಿ ಎಷ್ಟು ಹುಡುಗಿಯರಿಗೆ ಮೋಸ ಮಾಡಿರಬಹುದು ಎಂಬುದರ ಬಗ್ಗೆಯೂ ತನಿಖೆ ಆಗಬೇಕು. ಮಗಳು ಇಷ್ಟವಿಲ್ಲದಿದ್ದರೆ ನಮಗೆ ಹೇಳಬೇಕಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು.

ಬಡ ಮಕ್ಕಳಿಗೆ ಸಹಾಯ: ಕೃತಿಕಾ ರೆಡ್ಡಿ ತಂದೆ ಮುನಿರೆಡ್ಡಿ ಮಾತನಾಡಿ, ‘ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಇಬ್ಬರು ಮಕ್ಕಳನ್ನು ಓದಿಸಿದ್ದೇವೆ. ಹಣಕಾಸಿನ ಸಮಸ್ಯೆ ಇರಲಿಲ್ಲ. ಉಚಿತ ಆರೋಗ್ಯ ಶಿಬಿರ ಆಯೋಜಿಸಿ, ಜನರಿಗೆ ಸೇವೆ ಮಾಡುವ ಉದ್ದೇಶ ಇತ್ತು. ಅದು ಬಿಟ್ಟರೆ ಹಣ ಮಾಡುವ ಉದ್ದೇಶ ಇರಲಿಲ್ಲ. ಮಗಳ ಹೆಸರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.