
ಕೆ.ಆರ್.ಪುರ: ಐಟಿ ಕಾರಿಡಾರ್ ಐಟಿಪಿಎಲ್ ಸಮೀಪವಿರುವ ಹೂಡಿ ಗ್ರಾಮದಲ್ಲಿ ಕಸದ ಸಮಸ್ಯೆ ತೀವ್ರವಾಗಿದ್ದು ಪ್ರಮುಖ ರಸ್ತೆಗಳು, ಸಾರ್ವಜನಿಕ ಸ್ಥಳಗಳು ಕಸದ ಬ್ಲ್ಯಾಕ್ ಸ್ಪಾಟ್‌ಗಳಾಗಿವೆ.
ನಗರ ಪಾಲಿಕೆ ವತಿಯಿಂದ ಮನೆಗಳಿಂದ ಕಸವನ್ನು ಸಮರ್ಪಕವಾಗಿ ಸಂಗ್ರಹಿಸುತ್ತಿಲ್ಲ. ಇದರಿಂದ ದೇವಸ್ಥಾನ, ಶಾಲೆ, ಆಸ್ಪತ್ರೆ, ಹೋಟೆಲು, ಖಾಲಿ ನಿವೇಶನಗಳಲ್ಲಿ ಕಸ ಎಸೆದು ಹೋಗುತ್ತಿರುವುದು ಹೆಚ್ಚಾಗುತ್ತಿದೆ.
ಮಹದೇವಪುರ ವಿಧಾನಸಭೆ ಕ್ಷೇತ್ರ– ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೂಡಿ ಗ್ರಾಮ ಸಮೀಪವೇ ಇರುವುದರಿಂದ ಇಲ್ಲಿ ಅತಿ ಹೆಚ್ಚು ಪೇಯಿಂಗ್ ಗೆಸ್ಟ್ (ಪಿಜಿ) ಕೇಂದ್ರಗಳಿವೆ. ನಿತ್ಯ ಮನೆ ಮತ್ತು ಪಿಜಿಗಳಿಂದ ಪಾಲಿಕೆಯಿಂದ ಸಂಗ್ರಹಿಸುತ್ತಿಲ್ಲ. ಸ್ಥಳೀಯ ನಿವಾಸಿಗಳ ಮನವಿಗೂ ಪಾಲಿಕೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಕಸ ಸಂಗ್ರಹಿಸಲು ಆಟೊಗಳು ಬರುತ್ತಿಲ್ಲ. ಹಣ ನೀಡಿದವರ ಮನೆಯಿಂದ ಮಾತ್ರ ಪೌರ ಕಾರ್ಮಿಕರು ಕಸ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು.
‘ಸಾವಿರಾರು ರೂಪಾಯಿ ಕಸ ಸಂಗ್ರಹದ ಶುಲ್ಕವನ್ನು ಪಡೆಯುತ್ತಿದ್ದರೂ, ಪಾಲಿಕೆ ವತಿಯಿಂದ ಆ ಕೆಲಸವಾಗುತ್ತಿಲ್ಲ. ಹೀಗಾಗಿ, ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಕಾಣಬಹುದು. ನಗರ ಪಾಲಿಕೆ ಆಯುಕ್ತರು ಪರಿಶೀಲನೆಗೆ ಬಂದಾಗ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೂ, ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ’ ಎಂದು ಹೂಡಿ ನಿವಾಸಿ ಮುರುಳಿ ಆರೋಪಿಸಿದರು.
‘ಕಸದ ನಿರ್ವಹಣೆ ಹೊಣೆ ಹೊತ್ತಿರುವ ಪಾಲಿಕೆ ಅಧಿಕಾರಿ ಎಇಇ ಜ್ಯೋತಿ ಅವರು ಕರೆ ಸ್ವೀಕರಿಸುವುದಿಲ್ಲ. ಕೆಲವೊಮ್ಮೆ ಕರೆ ಸ್ವೀಕರಿಸಿದರೂ ಮಾರ್ಷಲ್‌ಗೆ ಕರೆ ಮಾಡಿ ಎನ್ನುತ್ತಾರೆ. ಕಸದ ರಾಶಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೋಗ ರುಜಿನಗಳೂ ಹೆಚ್ಚಾಗಿವೆ’ ಎಂದರು.
‘ಮನೆಯ ಮುಂದಿರುವ ಬಸ್ ನಿಲ್ದಾಣದಲ್ಲೇ ಕಸ ಸುರಿಯಲಾಗುತ್ತದೆ. ಇದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಸಮರ್ಪಕವಾಗಿ ಕಸ ನಿರ್ವಹಣೆ ಮಾಡದೇ ಇರುವುದು ಸಮಸ್ಯೆಗೆ ಕಾರಣ’ ಎಂದು ರಾಜಪಾಳ್ಯ ನಿವಾಸಿ ಶ್ರೀನಿವಾಸರಾಜು ಹೇಳಿದರು.
ಹಣ ವಸೂಲಿ: ‘ಕಸ ಸಂಗ್ರಹಕ್ಕೆ ಪ್ರತ್ಯೇಕವಾಗಿ ಶುಲ್ಕ ಪಾವತಿಸುತ್ತಿದ್ದರೂ, ಪೌರ ಕಾರ್ಮಿಕರಿಗೆ ಮತ್ತೆ ಹಣ ನೀಡಬೇಕು. ಪ್ರತಿ ತಿಂಗಳು 5ರಿಂದ 12ರವರೆಗೆ ಹಣ ವಸೂಲಿ ಮಾಡುತ್ತಾರೆ. ಅಧಿಕಾರಿಗಳಿಗೆ ಈ ಬಗ್ಗೆ ದೂರಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ’ ಎಂದು ತಿಗಳರಪಾಳ್ಯದ ನಿವಾಸಿ ಚಂದ್ರು ಹೇಳಿದರು.
‘ಮನೆಗಳಿಂದ ಕಸ ಸಂಗ್ರಹಿಸುವ ವಾಹನ ಬರುತ್ತಿಲ್ಲ. ಈ ಮೊದಲು ಒಂದು ವಾರಕ್ಕೆ ಒಮ್ಮೆಯಾದರೂ ಬರುತ್ತಿತ್ತು. ಈಗ ಅದೂ ಇಲ್ಲ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಸುರಿಯುವುದರಿಂದ ಮಕ್ಕಳಿಗೆ ರೋಗದ ಭೀತಿ ಉಂಟಾಗಿದೆ’ ಎಂದು ಹೂಡಿಯ ಮಾರಮ್ಮ ದೇವಸ್ಥಾನದ ಬಳಿಯ ನಿವಾಸಿ ನೇತ್ರಾ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.