ಸಾಂದರ್ಭಿಕ-ಚಿತ್ರ
- ಎ.ಐ ಚಿತ್ರ
ಬೆಂಗಳೂರು: ‘ಕರ್ನಾಟಕದ ಹೈನೋದ್ಯಮದಲ್ಲಿ 9 ಲಕ್ಷ ಮಂದಿ ತೊಡಗಿಸಿಕೊಂಡಿದ್ದು, ಇದರಲ್ಲಿ ಮಹಿಳೆಯರ ಸಂಖ್ಯೆಯೇ 4.72 ಲಕ್ಷ. ಈ ಮೂಲಕ ಮಹಿಳೆಯರು ದೇಶ, ರಾಜ್ಯದ ಆರ್ಥಿಕ ಪ್ರಗತಿ ಹಾಗೂ ತಲಾ ಆದಾಯ ವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ’ ಎಂದು ಕರ್ನಾಟಕ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಹೇಳಿದರು.
ಕರ್ನಾಟಕ ಹಾಲು ಮಹಾಮಂಡಳ, ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕ್ಷೀರ ಸಂಜೀವಿನಿ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕ್ಷೀರ ಸಂಜೀವಿನಿ ಹಂತ-1 ರಿಂದ 5ರ ಯೋಜನೆಯಡಿ ಹೈನುಗಾರಿಕೆ ಮೂಲಕ ಗ್ರಾಮೀಣ ಮಹಿಳೆಯರ ಸಾಮಾಜಿಕ-ಆರ್ಥಿಕ ಅಭಿವೃದ್ದಿಗೆ ₹75.93 ಕೋಟಿ ಮೀಸಲಿರಿಸಲಾಗಿದೆ. ಕ್ಷೀರ ಸಂಜೀವಿನಿ ಯೋಜನೆಯಡಿಯಲ್ಲಿ ಹೈನುಗಾರಿಕೆ ಮೂಲಕ ಗ್ರಾಮೀಣ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಉದ್ದೇಶದಿಂದ ಆದ್ಯತಾ ಗುಂಪಿನ ಸದಸ್ಯರಿಗೆ ತರಬೇತಿ, ಬಡ್ಡಿ ರಹಿತ ಅಂಚಿನ ಹಣದ ಮೂಲಕ ಹೈನುಗಳನ್ನು ಕೊಡಿಸುವುದು ಹಾಗೂ ಅರಿವು ಕಾರ್ಯಕ್ರಮ ಕೈಗೊಳ್ಳಲಾಗಿದ್ದು, ಯೋಜನೆಯು ಪ್ರಗತಿಯಲ್ಲಿದೆ ಎಂದರು.
ಕೆಎಂಎಫ್ ಆಡಳಿತಾಧಿಕಾರಿ ಟಿ.ಎಚ್.ಎಂ.ಕುಮಾರ್, ರಾಷ್ಟ್ರೀಯ ಜೀವನೋಪಾಯ ಮಿಷನ್ ಯೋಜನಾ ನಿರ್ದೇಶಕಿ ಆರ್.ಸ್ನೇಹಲ್, ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ನಂಜೇಗೌಡ, ಮೈಸೂರು ಹಾಲು ಒಕ್ಕೂಟದ ಅಧ್ಯಕ್ಷ ಈರೇಗೌಡ, ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಶಿವಕುಮಾರ್, ಚಾಮರಾಜನಗರ ಹಾಲು ಒಕ್ಕೂಟದ ಅಧ್ಯಕ್ಷ ನಂಜುಂಡಸ್ವಾಮಿ, ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ್, ಬಾಗಲಕೋಟ ವಿಜಯಪುರ ಹಾಲು ಒಕ್ಕೂಟದ ಅಧ್ಯಕ್ಷ ಕರೇಗೌಡ, ಕಲಬುರಗಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್, ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿಚಂದ್ರ ಹೆಗ್ಡೆ ಉಪಸ್ಥಿತರಿದ್ದರು.
ದಶಮಾನೋತ್ಸವ ಪ್ರಯುಕ್ತ ಕರ್ನಾಟಕ ಹಾಲು ಮಹಾಮಂಡಳದ 16 ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ 1500 ಹಾಲು ಉತ್ಪಾದಕ ಮಹಿಳಾ ಸದಸ್ಯರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.