ಪ್ರಜಾವಾಣಿ ವಾರ್ತೆ
ಬೆಂಗಳೂರು: ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಕಾರಣಕ್ಕೆ ಸಾರಿಗೆ ನಿಗಮಗಳು 30,000 ನೌಕರರಿಗೆ ನೀಡಿರುವ ಆಪಾದನಾ ಪತ್ರ ಮತ್ತು ಕಾರಣ ಕೇಳಿರುವ ನೋಟಿಸ್‌ಗಳನ್ನು ರದ್ದು ಮಾಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗ್ರಹಿಸಿದೆ.
ಜಂಟಿ ಕ್ರಿಯಾ ಸಮಿತಿ ಗುರುವಾರ ಈ ಬಗ್ಗೆ ಸಭೆ ನಡೆಸಿದೆ. ‘ಮುಷ್ಕರವನ್ನು ಹಿಂಪಡೆದ ಮೇಲೆ ಇಂಥ ಸೇಡಿನ ಕ್ರಮಗಳನ್ನು ಕೈಗೊಂಡಿರುವುದು ಸರಿಯಲ್ಲ. ಈ ಕ್ರಮ ಕೈಗಾರಿಕಾ ಶಾಂತಿಗೆ ಧಕ್ಕೆ ತರುವುದಲ್ಲದೇ, ನೌಕರರನ್ನು ಹತಾಶೆಗೆ ದೂಡುತ್ತದೆ. ನೈತಿಕ ಸ್ಥೈರ್ಯ ಕುಸಿಯಲು ಕಾರಣವಾಗುತ್ತದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಆರ್‌ಟಿಸಿ, ಕೆಕೆಆರ್‌ಟಿಸಿ ಈ ನೋಟಿಸ್‌ಗಳನ್ನು ರದ್ದು ಮಾಡಬೇಕು ಎಂದು ಕಾರ್ಮಿಕ ಆಯುಕ್ತರನ್ನು ಒತ್ತಾಯಿಸಲಾಯಿತು. ಕೈಗಾರಿಕಾ ಶಾಂತಿ ನೆಲೆಸಿರುವುದರಿಂದ ಕ್ರಮ ಅನಗತ್ಯ ಎಂದು ಕಾರ್ಮಿಕ ಆಯುಕ್ತರು ನಿಗಮಗಳಿಗೆ ಸೂಚನೆ ನೀಡಿದ್ದಾರೆ. ನಿಗಮಗಳ ಆಡಳಿತ ಮಂಡಳಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಜಂಟಿ ಕ್ರಿಯಾ ಸಮಿತಿಯ ಸಂಘಟನೆಗಳು ಒತ್ತಾಯಿಸಿವೆ.
ನೌಕರರಿಗೆ ನೋಟಿಸ್ ನೀಡುವ ಉತ್ಸಾಹ ನೌಕರರ ಬೇಡಿಕೆಗಳನ್ನು ಇತ್ಯರ್ಥಪಡಿಸಲು ತೋರಿಸಿದ್ದರೆ ಮುಷ್ಕರ ಮಾಡುವ ಸನ್ನಿವೇಶ ಬರುತ್ತಿರಲಿಲ್ಲ ಎಂದು ಸಮಿತಿಯ ಪದಾಧಿಕಾರಿಗಳು ಟೀಕಿಸಿದ್ದಾರೆ.
ವಿಧಾನಸಭೆಯ ಅಧಿವೇಶನ ಮುಗಿದ ಬಳಿಕ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿರುವುದರಿಂದ ಮುಂದಿನ ರಾಜಿ ಸಂಧಾನ ಸಭೆ ಆ.28ರಂದು ನಿಗದಿಯಾಗಿದೆ ಎಂದು ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ಅಧ್ಯಕ್ಷ ಬಿ. ಜಯದೇವರಾಜೇ ಅರಸು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ (ಸಿಐಟಿಯು) ಅಧ್ಯಕ್ಷ ಎಚ್.ಡಿ. ರೇವಪ್ಪ, ಕೆಎಸ್‌ಆರ್‌ಟಿಸಿ ಎಸ್‌ಸಿ, ಎಸ್‌ಟಿ ಎಂಪ್ಲಾಯಿಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ್, ಪರಿಶಿಷ್ಟ ಜಾತಿ/ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಣ್ಣ ವಿ., ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಜಗದೀಶ್ ಕೆ.ಆರ್., ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.