ಬೆಂಗಳೂರು: ಕುದ್ಮುಲ್ ರಂಗರಾಯರನ್ನು ಕಲ್ಲಿನಲ್ಲಿ, ಮೂರ್ತಿಯಲ್ಲಿ ಇರಿಸಿ ನೋಡುವ ಬದಲು ಅವರು ಮಾಡಿದ ವೈಚಾರಿಕ ಕ್ರಾಂತಿ ಕಡೆಗೆ ಜನರನ್ನು ಒಯ್ಯಬೇಕಿದೆ ಎಂದು ವಿಶ್ರಾಂತ ಕುಲಪತಿ ಜೋಗನ್ ಶಂಕರ್ ತಿಳಿಸಿದರು.
ದಲಿತಗುರು ತಲಕಾಡು ರಂಗೇಗೌಡ ಸ್ಮಾರಕ ದತ್ತಿ ಉಪನ್ಯಾಸ ‘ಸಾಮಾಜಿಕ ಪರಿವರ್ತನೆ: ಕುದ್ಮುಲ್ ರಂಗರಾಯರ ದಿಟ್ಟ ಹೆಜ್ಜೆಗಳು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕುದ್ಮುಲ್ ಅವರು ಸ್ಥಾಪಿಸಿದ ಶಾಲೆಗಳಿಗೆ ಹೋಗಿದ್ದೆ. ಅವು ಭಜನೆ ಕೇಂದ್ರಗಳಾಗಿದ್ದವು. ಅವರ ಮೌಲ್ಯಗಳನ್ನು ಪಾಲಿಸಿಕೊಂಡು ಅವರು ನಡೆದ ಹೆಜ್ಜೆಗಳ ಮೇಲೆ ನಾವು ಹೆಜ್ಜೆ ಇಡಬೇಕು’ ಎಂದು ಸಲಹೆ ನೀಡಿದರು.
ಸುಧಾರಣೆ ಕೇವಲ ಸಾಮಾಜಿಕವಾಗಿ ನಡೆದರೆ ಸಾಲದು, ಅದರೊಂದಿಗೆ ಆರ್ಥಿಕವಾಗಿಯೂ ಧಾರ್ಮಿಕವಾಗಿಯೂ ಬದಲಾವಣೆ ತರುವಂಥದ್ದಾಗಬೇಕು. ಈ ರೀತಿಯ ಸುಧಾರಣೆಯನ್ನು ಮಾಡಿದವರು ರಂಗರಾಯರು. ಶಾಲೆ ಮತ್ತು ವೃತ್ತಿ ಶಿಕ್ಷಣವನ್ನು ಒಟ್ಟೊಟ್ಟಿಗೆ ಬೆಸೆದವರು. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಎನ್ನುವುದು ಈಗಿನ ಕಲ್ಪನೆಯಲ್ಲ. ಅದು ಕುದ್ಮುಲ್ ಅವರ ಪರಿಕಲ್ಪನೆ. ಆಗಲೇ ಬಿಸಿಯೂಟ ಪದ್ಧತಿಯನ್ನು ಅವರು ಸ್ಥಾಪಿಸಿದ ಶಾಲೆಗಳಲ್ಲಿ ತಂದಿದ್ದರು. ಮುಷ್ಟಿ ಅಕ್ಕಿ ಸಂಗ್ರಹ ಎಂಬ ಕಲ್ಪನೆಯ ಮೂಲಕ ಬಿಸಿಯೂಟಕ್ಕೆ ಬೇಕಾದ ಪದಾರ್ಥಗಳನ್ನು ಸಂಗ್ರಹಿಸುವ ಕಾರ್ಯ ಮಾಡುತ್ತಿದ್ದರು ಎಂದು ನೆನಪು ಮಾಡಿಕೊಂಡರು.
ಕುದ್ಮುಲ್ ಅವರು ತನ್ನ ವಕೀಲ ವೃತ್ತಿಯಿಂದ ಬಂದ ಹಣವನ್ನೆಲ್ಲ ತುಳಿತಕ್ಕೊಳಗಾದ ಸಮುದಾಯಗಳ ಏಳಿಗೆಗೆ ಬಳಸಿದರು. ಡಿಪ್ರೆಸ್ಡ್ ಕ್ಲಾಸಸ್ ಮಿಷನ್ (ಡಿಸಿಎಂ) ಸಂಸ್ಥೆಯನ್ನು ಆರಂಭಿಸಿದ್ದರು. ಅದರ ಮೂಲಕ ಅನೇಕ ಶಾಲೆ, ವಸತಿ ಶಾಲೆಗಳನ್ನು ತೆರೆದರು. ಹೆತ್ತವರು ತಮ್ಮ ಮಕ್ಕಳನ್ನು ಜೀತಕ್ಕೆ ಕಳುಹಿಸುವ ಬದಲು ಶಾಲೆಗೆ ಕಳುಹಿಸುವಂತೆ ಪ್ರೋತ್ಸಾಹಿಸುವುದಕ್ಕಾಗಿ ಪೋಷಕ ಪ್ರೋತ್ಸಾಹ ಧನ ಯೋಜನೆ ತಂದಿದ್ದರು. ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಆದಿದ್ರಾವಿಡ ಸಹಕಾರಿ ಸಂಘವನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸಿದ್ದರು. ರಾಜಕೀಯವಾಗಿ ಸಶಕ್ತರನ್ನಾಗಿ ಮಾಡಬೇಕು ಎಂಬ ಕಾರಣಕ್ಕೆ ಗೋವಿಂದ ಮಾಸ್ಟರ್‌ರಂಥವರನ್ನು ಪುರಸಭೆಗೆ ನಾಮಕರಣ ಮಾಡಿದ್ದರು. ಆರೋಗ್ಯಕ್ಕೆ ಪ್ರಾಧಾನ್ಯ ನೀಡಿದ್ದರು. ಹೆಣ್ಣುಮಕ್ಕಳಿಗಾಗಿ ಗೋಮತಿಯಮ್ಮ ಮೆಟರ್ನಿಟಿ ಫಂಡ್ ಆರಂಭಿಸಿದ್ದರು ಎಂದು ಸ್ಮರಿಸಿದರು.
‘ಮುಂದಿನ ಜನ್ಮ ಇದ್ದರೆ ದಲಿತನಾಗಿ ಹುಟ್ಟಬೇಕು ಎಂದು ಮಹಾತ್ಮರು ಹೇಳಿದ್ದನ್ನು ಕೇಳಿದ್ದೇವೆ. ಆದರೆ, ಕುದ್ಮುಲ್ ರಂಗರಾಯರು ಮುಂದಿನ ಜನ್ಮಕ್ಕಾಗಿ ಕಾಯದೇ ಇರೋ ಈ ಜನ್ಮದಲ್ಲಿಯೇ ದಲಿತರ ಉದ್ಧಾರಕ್ಕಾಗಿ ಕೆಲಸ ಮಾಡಿದರು. ಎಲ್ಲ ಬಿರುದು ಬಾವಲಿಗಳನ್ನು ಬೆಂಕಿಗೆ ಹಾಕಿ ‘ನಾನಿಲ್ಲ.. ಇದ್ದರೆ ನನ್ನ ಕೆಲಸಗಳು ಮಾತ್ರ’ ಎಂದು ಸಾರಿದ್ದರು. ಕೊನೆಗೆ 1924ರಲ್ಲಿ ಸನ್ಯಾಸ ಸ್ವೀಕರಿಸುವ ಮೊದಲು ಅವರು ಸ್ಥಾಪಿಸಿದ್ದ ಶಾಲೆ, ವಸತಿನಿಲಯಗಳನ್ನು ಸರ್ವೆಂಟ್ಸ್ ಆಫ್ ಇಂಡಿಯಾಕ್ಕೆ ವರ್ಗಾವಣೆ ಮಾಡಿ ಮಾದರಿಯಾಗಿದ್ದರು’ ಎಂದರು.
ಆರ್‌ಎಸ್‌ಎಸ್ ಮುಖಂಡ ವಾದಿರಾಜ್ ಉಪನ್ಯಾಸ ನೀಡಿದರು. ಕುದ್ಮುಲ್ ರಂಗರಾಯರ ಮರಿಮಗಳು ಪ್ರೇಮಿ ಎಂ.ರಾವ್, ರಂಗರಾಯರ ಬಗ್ಗೆ ಪುಸ್ತಕಗಳನ್ನು ಬರೆದಿರುವ ಡಿ. ಅಣ್ಣು, ಚಿತ್ರಲೇಖಾ ಕಮಲಾಕ್ಷ ಅವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.