ADVERTISEMENT

ಕೊರಮ, ಕೊರಚ ಸಮಾಜ ನಿರ್ಲಕ್ಷ್ಯ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 19:55 IST
Last Updated 26 ಮಾರ್ಚ್ 2022, 19:55 IST

ಬೆಂಗಳೂರು: ಕೊರಮ-ಕೊರಚ-ಕೊರವ ( ಕುಳುವ) ಸಮುದಾಯದವರನ್ನು ಕಳೆದ 20 ವರ್ಷಗಳಿಂದ ನಿರಂತರವಾಗಿ ಎಲ್ಲಾ ರಾಜಕೀಯ ಪಕ್ಷಗಳು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿವೆ ಎಂದು ಮಾಜಿ ಶಾಸಕ ಜಿ. ಚಂದ್ರಣ್ಣ ಹೇಳಿದರು.

ಅಖಿಲ ಕರ್ನಾಟಕ ಕುಳುವ ಮಹಾ ಸಂಘವು (ಕೊರಮ,ಕೊರಚ, ಕೊರವರ ಒಕ್ಕೂಟ) ‘ಕುಳುವರ ಜಾಗತಿಕ ಅಸ್ಮಿತೆ ಹಾಗೂ ಸಮಕಾಲೀನ ರಾಜಕೀಯ ಸವಾಲುಗಳು’ ಎಂಬ ವಿಷಯ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಅಲೆ ಮಾರಿಗಳೂ ಆಗಿರುವ ಅಲಕ್ಷಿತ ಸಮುದಾಯವನ್ನುಎಲ್ಲ ರಾಜಕೀಯ ಪಕ್ಷಗಳು ಸಂವಿಧಾನಬದ್ಧ ಮೀಸ ಲಾತಿಯಿಂದ ವಂಚಿಸುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

2002ರ ಬಳಿಕ ಕೆಲವು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ಕುಳುವ ಸಮಾಜವನ್ನು ತುಳಿಯುವ ಕೆಲಸ ಮಾಡಿವೆ. 2013ರ ಬಜೆಟ್‌ನಲ್ಲಿ ಕೊರಮ‌-ಕೊರಚ ಅಭಿವೃದ್ಧಿ ನಿಗಮ ಸ್ಥಾ‍ಪಿಸುವುದಾಗಿ ಘೋಷಣೆ ಮಾಡಲಾಗಿತ್ತು. ಅನುದಾನವನ್ನೇ ನೀಡದೇ ವಂಚಿಸಲಾಗಿದೆ ಎಂದರು.

ADVERTISEMENT

ನುಲಿಯ ಚಂದಯ್ಯನವರ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸುವಂತೆ ಕುಳುವ ಸಮಾಜವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತ್ತು. ಅದನ್ನು ಈಡೇರಿಸದೇ ಅನ್ಯಾಯ ಎಸಗಲಾಗಿದೆ ಎಂದರು.

ಬಿಜೆಪಿ ಎಸ್‌ಸಿ ಮೋರ್ಚಾ ಖಜಾಂಚಿ ದೇವನಹಳ್ಳಿ ನಾಗೇಶ್, ಕುಳುವ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಕುಮಾರ್ ಏಕಲವ್ಯ, ಪರಿಶಿಷ್ಟ ಜಾತಿ–ಪಂಗಡದ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕಿರಣಕುಮಾರ್ ಕೊತ್ತಗೆರೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.