ADVERTISEMENT

ವೃದ್ಧೆ ಕೈ- ಕಾಲು ಕಟ್ಟಿ ದರೋಡೆ: ಒಡಿಶಾದ ಆರೋಪಿಗಳ ಬಂಧನ

ನಗದು, ಚಿನ್ನಾಭರಣ ಜಪ್ತಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 20:12 IST
Last Updated 10 ಜನವರಿ 2023, 20:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿ ವೃದ್ಧೆ ಶ್ರೀಲಕ್ಷ್ಮಿ ಅವರ ಕೈ–ಕಾಲು ಕಟ್ಟಿ ದರೋಡೆ ಮಾಡಿದ್ದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಒಡಿಶಾದ ಸುಧಂಶು ಬೆಹೆರ್ (21), ಜ್ಞಾನರಂಜನ್ (36), ಶ್ರೀಕಾಂತ್ ದಾಸ್ (40), ಸುಭಾಷ್ ಬಿಸ್ವಾಲ್ (41), ಬಿಷು ಮೋಹನ್ ಖಾಟೊ (35), ಬಿಷು ಚರಣ್ ಬೆಹೆರ್ (61) ಬಂಧಿತರು. ಇವರಿಂದ ₹ 3.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ
₹ 1.50 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವೃದ್ಧೆ ಶ್ರೀಲಕ್ಷ್ಮಿ, ವೈದ್ಯರಾಗಿರುವ ಮಗಳ ಜೊತೆ ನೆಲೆಸಿದ್ದರು. ಆರೋಪಿ ಸುಧಂಶುನ ಅಕ್ಕ, ವೃದ್ಧೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು. ಮಗಳು ಕ್ಲಿನಿಕ್‌ಗೆ ಹೋದಾಗ ವೃದ್ಧೆಯೊಬ್ಬರೇ ಮನೆಯಲ್ಲಿರುತ್ತಾರೆಂಬ ಮಾಹಿತಿ ಆರೋಪಿಗೆ ಗೊತ್ತಿತ್ತು. ಹೀಗಾಗಿ, ಮನೆಗೆ ನುಗ್ಗಿ ದರೋಡೆ ಮಾಡಲು ಆರೋಪಿ ಸಂಚು ರೂಪಿಸಿದ್ದ. ಇದಕ್ಕಾಗಿ ಒಡಿಶಾದಲ್ಲಿರುವ ಸ್ನೇಹಿತರ ಸಹಾಯ ಪಡೆದಿದ್ದ. ಜ. 3ರಂದು ಮಗಳು ಕ್ಲಿನಿಕ್‌ಗೆ ಹೋಗಿದ್ದರು. ಅಂದು ಸಂಜೆ ಮನೆಗೆ ನುಗ್ಗಿದ್ದ ಆರೋಪಿಗಳು, ಶ್ರೀಲಕ್ಷ್ಮಿ ಮೇಲೆ ಹಲ್ಲೆ ಮಾಡಿದ್ದರು. ಕೈ–ಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಹಾಕಿದ್ದರು. ನಂತರ, ಚಿನ್ನಾಭರಣ ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಕೃತ್ಯದ ಬಗ್ಗೆ ಮಗಳು ದೂರು ನೀಡಿದ್ದಾರೆ. ತನಿಖೆಯಲ್ಲಿ ಮನೆ ಕೆಲಸದ ಮಹಿಳೆಯ ತಮ್ಮ ಆರೋಪಿ ಎಂಬುದು ತಿಳಿಯಿತು. ಆತನನ್ನು ವಶಕ್ಕೆ ಪಡೆದು, ವಿಚಾರಿಸಿದಾಗ ಉಳಿದರ ಹೆಸರು ಪತ್ತೆಯಾಯಿತು. ಒಡಿಶಾಗೆ ಹೋಗಿದ್ದ ವಿಶೇಷ ತಂಡ, ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.