ಕೆಂಗೇರಿ: ‘ಸೈನಿಕರ ನೈತಿಕ ಶಕ್ತಿಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಪಂಚಾಯಿತಿ ವತಿಯಿಂದ ಸೈನಿಕರ ಕಲ್ಯಾಣ ನಿಧಿಗೆ ₹10 ಲಕ್ಷ ದೇಣಿಗೆ ನೀಡಲಾಗುತ್ತಿದೆ’ ಎಂದು ಕುಂಬಳಗೋಡು ಪಂಚಾಯಿತಿ ಅಧ್ಯಕ್ಷ ಎನ್. ದೇವರಾಜ್ ಹೇಳಿದರು.
ಕುಂಬಳಗೋಡು ಪಂಚಾಯಿತಿಯ 2025-26ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮಸಭೆಯಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ದೇಣಿಗೆಯ ಚೆಕ್ ನೀಡಿ, ಅವರು ಮಾತನಾಡಿದರು.
ಪಂಚಾಯಿತಿ ವ್ಯಾಪ್ತಿಯ ಸಮಸ್ತ ಮಹಿಳೆಯರ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಸೌಧ ನಿರ್ಮಿಸುವ ಉದ್ದೇಶ ಹೊಂದಿದ್ದು, ಶಾಸಕ ಎಸ್. ಟಿ. ಸೋಮಶೇಖರ್ ಅಗತ್ಯ ಬೆಂಬಲ ನೀಡುವಂತೆ ಕೋರಿದರು.
ಕಡೆಯ ಗ್ರಾಮ ಸಭೆ: ಜಿಬಿಎ ಅಸ್ತಿತ್ವಕ್ಕೆ ಬಂದಿರುವುದರಿಂದ ಕುಂಬಳಗೋಡು ಗ್ರಾಮ ಪಂಚಾಯಿತಿಯ ಕಟ್ಟ ಕಡೆಯ ಗ್ರಾಮಸಭೆ ಹಲವಾರು ಸವಲತ್ತುಗಳ ವಿತರಣೆಗೆ ಸಾಕ್ಷಿಯಾಯಿತು.
ಹೊಸಪಾಳ್ಯ, ಕುಂಬಳಗೋಡು, ಅಂಚೆಪಾಳ್ಯ, ಗೇರು ಪಾಳ್ಯ, ಕಣಿಮಿಣಕೆ ಅಂಗನವಾಡಿಗಳಿಗೆ ತಲಾ ಒಂದು ವಾಟರ್ ಫಿಲ್ಟರ್, ಹೊಸಪಾಳ್ಯ ಅಂಗನವಾಡಿಗೆ ಒಂದು ಫ್ರಿಡ್ಜ್, ಪಂಚಾಯಿತಿ ವ್ಯಾಪ್ತಿಯ 65 ಸ್ತ್ರೀ ಶಕ್ತಿ ಗುಂಪುಗಳಿಗೆ ಸೀರೆ, ಬಾಣಂತಿಯರು, ಅಂಗವಿಕಲರು ಸೇರಿದಂತೆ 1000 ಮಂದಿಗೆ ಕುಕ್ಕರ್, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ₹10 ಸಾವಿರ ವಿದ್ಯಾರ್ಥಿವೇತನ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸೀರೆಗಳನ್ನು ವಿತರಿಸಲಾಯಿತು.
ಶಾಸಕ ಎಸ್. ಟಿ. ಸೋಮಶೇಖರ್ ಮಾತನಾಡಿ, ‘ಜಲ ಜೀವನ್ ಮಿಷನ್ ಅಡಿ ನೀರಿನ ಸಂಪರ್ಕಕ್ಕಾಗಿ ತೋಡಿರುವ ಗುಂಡಿಗಳಿಗೆ ಬಿದ್ದು ದ್ವಿಚಕ್ರ ಸವಾರರು ಸಾವಿಗೆ ಈಡಾಗುತ್ತಿದ್ದಾರೆ. ಅಧಿಕಾರಿಗಳು ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು’ ಎಂದು ತಾಕೀತು ಮಾಡಿದರು.
ಕುಂಬಳಗೋಡು ಪಂಚಾಯಿತಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸೇರ್ಪಡೆ ಯಾಗುವ ಮೂಲಕ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಚನಬೆಲೆ ಜಲಾಶಯದಿಂದ ಕ್ಷೇತ್ರದ 71 ಗ್ರಾಮಗಳಿಗೆ ಕುಡಿಯುವ ನೀರು ದೊರಕಲಿದೆ ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷ ಗೋಪಾಲ ಕೃಷ್ಣ, ಮಾಜಿ ಅಧ್ಯಕ್ಷರಾದ ಚಿಕ್ಕರಾಜು, ನರಸಿಂಹಮೂರ್ತಿ ಮುಖಂಡರಾದ ಅನಿಸ್, ಯಶೋದಮ್ಮ, ನಂಜಪ್ಪ, ನಂಜೇಗೌಡ ಮತ್ತಿತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.