ADVERTISEMENT

ಕುಂದು ಕೊರತೆ: ವಿಲೇವಾರಿ ಆಗದ ಕಸ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 0:01 IST
Last Updated 28 ಏಪ್ರಿಲ್ 2025, 0:01 IST
<div class="paragraphs"><p>ಶ್ರೀರಾಮ ಅಪಾರ್ಟ್‌ಮೆಂಟ್‌ನ ಜೋಡಿ ರಸ್ತೆಯಲ್ಲಿ ಹಾಕಿರುವ ಕಸ</p></div>

ಶ್ರೀರಾಮ ಅಪಾರ್ಟ್‌ಮೆಂಟ್‌ನ ಜೋಡಿ ರಸ್ತೆಯಲ್ಲಿ ಹಾಕಿರುವ ಕಸ

   

‘ವಿಲೇವಾರಿ ಆಗದ ಕಸ’

ಹೆಬ್ಬಾಳದ ಸುಮಂಗಲಿ ಸೇವಾ ಆಶ್ರಮದ ರಸ್ತೆಯಲ್ಲಿರುವ ಶ್ರೀರಾಮ ಅಪಾರ್ಟ್‌ಮೆಂಟ್‌ನ ಜೋಡಿ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದ್ದು, ಇಲ್ಲಿ ಜನರು ಮೂಗು ಮುಚ್ಚಿಕೊಂಡೇ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಮುಂಜಾನೆ ಇದೇ ಮಾರ್ಗದಲ್ಲಿ ಸಾಗುವ ವಾಯುವಿಹಾರಿಗಳೂ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರು ವಾಹನಗಳಲ್ಲಿ ಬಂದು, ಇಲ್ಲಿ ಕಸ ಎಸೆಯುತ್ತಿದ್ದಾರೆ. ಇದರಿಂದಾಗಿ ಒಮ್ಮೆ ವಿಲೇವಾರಿ ಮಾಡಿದರೂ ಮತ್ತೆ ಕಸದ ರಾಶಿ ಬೆಳೆಯುತ್ತದೆ. ಇಲ್ಲಿರುವ ಕಸವನ್ನು ವಿಲೇವಾರಿ ಮಾಡಿ, ಕಸ ಹಾಕದಂತೆ ತಡೆಯಲು ಶಾಶ್ವತ ಪರಿಹಾರವನ್ನು ಒದಗಿಸಬೇಕು.

- ಜಿ.ಎಸ್. ಮಂಜುನಾಥ್, ಹೆಬ್ಬಾಳ

ADVERTISEMENT

‘ಚರಂಡಿಗೆ ಅಳವಡಿಸಿದ್ದ ಸಿಮೆಂಟ್‌ ಸ್ಲ್ಯಾಬ್ ಕುಸಿತ’

ಹೆಬ್ಬಾಳದ ಚೋಳ ನಗರದಲ್ಲಿರುವ ಗುಂಡಪ್ಪ ರೆಡ್ಡಿ ಬಡಾವಣೆಯ ಮೂರನೇ ಕ್ರಾಸ್‌ನಲ್ಲಿ ಒಂದು ತಿಂಗಳ ಹಿಂದೆಯಷ್ಟೇ ಚರಂಡಿಗೆ ಅಳವಡಿಸಿದ್ದ ಸಿಮೆಂಟ್‌ನ ಸ್ಲ್ಯಾಬ್‌ ಕುಸಿದು ಬಿದ್ದಿದೆ. ಆರ್‌.ಟಿ. ನಗರ ಹಾಗೂ ಕನಕನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಆಗಿದ್ದು, ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಇದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಆಗಿದೆ. ಈ ಬಗ್ಗೆ ಬಿಬಿಎಂಪಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು.

- ಮಂಜುನಾಥ್, ಚೋಳನಗರ

‘ಇ–ಶೌಚಾಲಯ ಉಪಯೋಗಕ್ಕೆ ಒದಗಿಸಲಿ’

ಜಯನಗರ ಎರಡನೇ ಬ್ಲಾಕ್‌ನ ಸಾರ್ವಜನಿಕ ಆಸ್ಪತ್ರೆ ಪಕ್ಕದ ಉದ್ಯಾನದ ಬಳಿ ಇರುವ ಪುರುಷ ಮತ್ತು ಮಹಿಳೆಯರ ಇ–ಶೌಚಾಲಯಗಳ ಬಾಗಿಲಿಗೆ ಬೀಗ ಹಾಕಲಾಗಿದೆ. ಇದರಿಂದ ಸಾರ್ವಜನಿಕರಿಗೆ ಅದರಲ್ಲೂ ವೃದ್ಧರು ಮತ್ತು ಮಹಿಳೆಯರಿಗೆ ತೊಂದರೆ ಆಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಅಳವಡಿಸಿರುವ ಇ–ಶೌಚಾಲಯಗಳು ಸಾರ್ವಜನಿಕ ಬಳಕೆಗೆ ಮುಕ್ತವಾಗಲಿ. ಇವುಗಳ ನಿರ್ವಹಣೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ, ಅವುಗಳನ್ನು ಸರಿಪಡಿಸಬೇಕು. 

- ಪತ್ತಂಗಿ ಎಸ್. ಮುರಳಿ, ಕುಮಾರಸ್ವಾಮಿ ಬಡಾವಣೆ

‘ಕುಸಿದ ರಾಜಕಾಲುವೆ ಸರಿಪಡಿಸಿ’

ಬನಶಂಕರಿ ಆರನೇ ಹಂತದ ನಾಲ್ಕನೇ ಟಿ. ಬ್ಲಾಕ್‌ನ ಮೂಲಕ ಹಾದು ಹೋಗಿರುವ ದೊಡ್ಡ ರಾಜಕಾಲುವೆ ಕುಸಿದು ಹೋಗುತ್ತಿದ್ದು, ಅದನ್ನು ಕೂಡಲೇ ದುರಸ್ತಿಗೊಳಿಸಬೇಕು. ಕಳೆದ ವರ್ಷ ಸ್ವಚ್ಚತೆಗೆಂದು ಈ ಕಾಲುವೆಗೆ ಜೆಸಿಬಿ ಇಳಿಸಲಾಗಿತ್ತು. ಆಗ ಹಾಳಾಗಿದ್ದ, ರಾಜಕಾಲುವೆಯ ಗೋಡೆಗಳನ್ನು ಇದುವರೆಗೂ ದುರಸ್ತಿಗೊಳಿಸಲಿಲ್ಲ. ಇದರಿಂದಾಗಿ ಕಂದಕ ಹಿರಿದಾಗುತ್ತಿದೆ. ಜೊತೆಗೆ ಬಡಾವಣೆಯ ಕಡೆಗಿನ ರಾಜಕಾಲುವೆ ಕುಸಿಯುತ್ತಿದೆ. ತಡೆಗೋಡೆ ಎತ್ತರವಿರದ ಕಾರಣ ಮಕ್ಕಳು, ಜಾನುವಾರುಗಳು ರಾಜಕಾಲುವೆಗೆ ಬೀಳುವ ಸಾಧ್ಯತೆ ಇದೆ. ದೊಡ್ಡ ಮಳೆಯಾದರೆ ಅಪಾಯ ಸಂಭವಿಸಲಿದೆ. ಸಂಬಂಧಪಟ್ಟ ಅಧಿಕಾರಿಗಳು ರಾಜಕಾಲುವೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. 

- ಆರ್. ಜಯಸಿಂಹ, ತಲಘಟ್ಟಪುರ

‘ಮ್ಯಾನ್‌ಹೋಲ್ ಕಾಮಗಾರಿ ಪೂರ್ಣಗೊಳಿಸಿ’

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎಂ.ಸಿ. ಲೇಔಟ್ ವಿಜಯನಗರ ಬಡಾವಣೆಯ ಒಂದನೇ ಮುಖ್ಯ ರಸ್ತೆಯಲ್ಲಿ  ಮ್ಯಾನ್‌ಹೋಲ್ ಕಾಮಗಾರಿ ಹಲವು ದಿನಗಳಿಂದ ಸ್ಥಗಿತಗೊಂಡಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಾತ್ರವಲ್ಲ, ಸಾರ್ವಜನಿಕರು ಓಡಾಡುವುದೂ ಕಷ್ಟವಾಗುತ್ತಿದೆ. ದೊಡ್ಡ ಮಳೆ ಬಂದರೆ ಮ್ಯಾನ್‌ಹೋಲ್‌ ಕುಸಿಯುವ ಸಾಧ್ಯತೆ ಇದೆ. ಮುಂದೆ ಯಾವುದೇ ಅನಾಹುತಗಳು ಸಂಭವಿಸುವ ಮೊದಲೇ ಬಿಬಿಎಂಪಿ ಅಧಿಕಾರಿಗಳು ಮ್ಯಾನ್‌ಹೋಲ್‌ ಕಾಮಗಾರಿ ಪೂರ್ಣಗೊಳಿಸಬೇಕು.

- ಕೆ.ಎಸ್. ಕುಮಾರಸ್ವಾಮಿ, ಎಂ.ಸಿ. ಲೇಔಟ್ ವಿಜಯನಗರ

‘ಸಮಯಕ್ಕೆ ಸರಿಯಾಗಿ ಬಸ್‌ ಸಂಚರಿಸಲಿ’

ಕೆಂಪೇಗೌಡ ಬಸ್‌ ನಿಲ್ದಾಣದಿಂದ ನಾಯಂಡಹಳ್ಳಿ ಮಾರ್ಗವಾಗಿ ಬಿಇಎಂಎಲ್‌ ಐದನೇ ಹಂತಕ್ಕೆ ಸಂಚರಿಸುವ 205–ಸಿ ಸಂಖ್ಯೆಯ ಬಸ್‌ ನಾಯಂಡಹಳ್ಳಿ ಬಸ್‌ ತಂಗುದಾಣಕ್ಕೆ ಬೆಳಗ್ಗಿನ ಜಾವ 5–15ಕ್ಕೆ ಸಂಚರಿಸುತ್ತಿತ್ತು. ಆದರೆ ಈಗ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಒಂದು ತಿಂಗಳಿನಿಂದ ಈ ಸಮಸ್ಯೆಯಾಗುತ್ತಿದೆ. ಒಮ್ಮೊಮ್ಮೆ ಬಸ್‌ ತಡವಾಗಿ ಬಂದರೆ, ಮತ್ತೊಮ್ಮೆ ಬರುವುದೇ ಇಲ್ಲ. ಈ ಮಾರ್ಗದಲ್ಲಿ ಸಂಚರಿಸುವ 205–ಬಿ, 401–ಆರ್‌ ಸಂಖ್ಯೆಯ ಬಸ್‌ಗಳು ಸರಿಯಾದ ಸಮಯಕ್ಕೆ ಸಂಚರಿಸಬೇಕು. ಇಲ್ಲದಿದ್ದರೆ ಪ್ರಯಾಣಿಕರು ಬೆಳಿಗ್ಗೆ 6 ಗಂಟೆಯವರೆಗೂ ಕಾಯಬೇಕಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು.

- ಪುಟ್ಟೇಗೌಡ, ಬನಶಂಕರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.