ADVERTISEMENT

ಸಿಸಿಬಿಯಿಂದ ರೌಡಿ ಕುಣಿಗಲ್‌ ಗಿರಿ ಬಂಧನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 20:06 IST
Last Updated 4 ಮಾರ್ಚ್ 2020, 20:06 IST
ಕುಣಿಗಲ್‌ ಗಿರಿ
ಕುಣಿಗಲ್‌ ಗಿರಿ   

ಬೆಂಗಳೂರು: 20ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಓಡಾಡುತ್ತಿದ್ದ ರೌಡಿ ಕುಣಿಗಲ್‌ ಗಿರಿ ಮಂಗಳವಾರ ರಾತ್ರಿ ಜೂಜಾಟದಲ್ಲಿ ತೊಡಗಿದ್ದ ವೇಳೆ ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಗಿರಿ ಬಂಧನದ ಬಗ್ಗೆ ಮಾಹಿತಿ ನೀಡಿದ ಸಿಸಿಬಿ ಜಂಟಿ ಕಮಿಷನರ್‌ ಸಂದೀಪ್ ಪಾಟೀಲ, ‘ಸಿಸಿಬಿ ಇನ್‌ಸ್ಪೆಕ್ಟರ್‌ ಶ್ರೀಧರ್ ಪೂಜಾರ ನೇತೃತ್ವದ ತಂಡ ಅರಮನೆ ರಸ್ತೆಯಲ್ಲಿರುವ ಕಂಟ್ರಾಕ್ಟರ್ಸ್‌ ಕ್ಲಬ್‌ ಮೇಲೆ ದಾಳಿ ಮಾಡಿ 17 ಮಂದಿಯನ್ನು ಬಂಧಿಸಿ ₹ 5 ಲಕ್ಷ ವಶಪಡಿಸಿಕೊಂಡಿತ್ತು. ಈ ವೇಳೆ ಜೂಜಾಟದಲ್ಲಿ ತೊಡಗಿದ್ದ ಗಿರಿ ಯನ್ನೂ ವಶಕ್ಕೆ ಪಡೆಯಲಾಗಿದೆ’ ಎಂದರು.

‘ಹಲವು ಪ್ರಕರಣಗಳಲ್ಲಿ ವಿಚಾರಣೆಗೆ ಬೇಕಾಗಿದ್ದ ಗಿರಿ, ವರ್ಷದ ಹಿಂದೆ ಟೈಮ್‌ ಬಾರ್‌ಗೆ ದಾಳಿ ನಡೆಸಿದಾಗ ಅಲ್ಲಿಂದ ಪರಾರಿಯಾಗಿದ್ದ’ ಎಂದರು.

ADVERTISEMENT

ಈತನ ವಿರುದ್ಧ ಸುಲಿಗೆ, ಡಕಾಯಿತಿ, ದರೋಡೆ, ಕಳವು ಸೇರಿ 120ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬ್ಯಾಂಕ್, ದೇವಸ್ಥಾನಗಳಲ್ಲಿ ಕನ್ನ, ಒಂಟಿ ಸವಾರರನ್ನು ಅಡ್ಡಗಟ್ಟಿ ಬೆದರಿಸಿ ಸುಲಿಗೆ ಮಾಡಿದ್ದಾನೆ. ಹೀಗಾಗಿ ‘ರಾಬರಿ ಗಿರಿ’ ಎಂದೂ ಗುರುತಿಸಿಕೊಂಡಿದ್ದ.

ಕಳೆದ ಜೂನ್‌ 16ರಂದು ರಾತ್ರಿ ತನ್ನ ಜನ್ಮದಿನದ ಅಂಗವಾಗಿ ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಡಾನ್ಸ್‌ ಬಾರೊಂದರಲ್ಲಿ ಸ್ನೇಹಿತರು ಹಾಗೂ ಸಹಚರರಿಗಾಗಿ ಗಿರಿ ಪಾರ್ಟಿ ಏರ್ಪಡಿಸಿದ್ದ. ಪಾರ್ಟಿಯಲ್ಲಿ ನೃತ್ಯ ಮಾಡಲು 266 ಯುವತಿಯರನ್ನೂ ಕರೆಸಿದ್ದ. ಅಲ್ಲಿಗೆ, ಸಿಸಿಬಿ ಪೊಲೀಸರು ದಾಳಿ ನಡೆಸಿದ ವೇಳೆ ಬಾರ್‌ನಲ್ಲಿದ್ದ ಫ್ರಿಡ್ಜ್‌ನಲ್ಲಿ ಅಡಗಿ ಕುಳಿತು ಪರಾರಿಯಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.