ADVERTISEMENT

ಕೆ.ಆರ್.ಪುರ ಪೊಲೀಸರ ವಶಕ್ಕೆ ಕುಣಿಗಲ್ ಗಿರಿ

ಜೂಜಾಟಕ್ಕೆ ಬಂದು ಸಿಕ್ಕಿಬಿದ್ದ ಕುಖ್ಯಾತ ಕಳ್ಳ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 19:53 IST
Last Updated 5 ಮಾರ್ಚ್ 2020, 19:53 IST
ಕುಣಿಗಲ್‌ ಗಿರಿ
ಕುಣಿಗಲ್‌ ಗಿರಿ   

ಬೆಂಗಳೂರು:ಅರಮನೆ ರಸ್ತೆಯಲ್ಲಿರುವ ಕಂಟ್ರಾಕ್ಟರ್ಸ್‌ ಕ್ಲಬ್‌ನಲ್ಲಿ ಸಿಕ್ಕಿಬಿದ್ದಿರುವ ಕುಖ್ಯಾತ ಕಳ್ಳ ಕುಣಿಗಲ್ ಗಿರಿಯನ್ನು ಕೆ.ಆರ್‌.ಪುರ ಪೊಲೀಸರ ವಶಕ್ಕೆ ನೀಡಲಾಗಿದೆ.

ಸುಲಿಗೆ, ಕಳ್ಳತನ ಸೇರಿ 128 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗಿರಿ ಎರಡು ವರ್ಷದಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ. ಕೆ.ಆರ್‌.ಪುರ ಹಾಗೂ ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣದಲ್ಲಿ ಆತನ ವಿರುದ್ಧ ಬಂಧನ ವಾರಂಟ್ ಜಾರಿ ಆಗಿತ್ತು.

ಕಂಟ್ರಾಕ್ಟರ್ಸ್‌ ಕ್ಲಬ್‌ ಮೇಲೆ ಮಾ. 3ರಂದು ರಾತ್ರಿ ದಾಳಿ ಮಾಡಿದ್ದ ಸಿಸಿಬಿ ಇನ್‌ಸ್ಪೆಕ್ಟರ್ ಶ್ರೀಧರ್ ಪೂಜಾರ ಹಾಗೂ ತಂಡ, ಗಿರಿ ಸೇರಿ 17 ಮಂದಿಯನ್ನು ಬಂಧಿಸಿ ₹ 5 ಲಕ್ಷ ವಶಪಡಿಸಿಕೊಂಡಿತ್ತು. ಇದನ್ನು ತಿಳಿದ ಕೆ.ಆರ್.ಪುರ ಪೊಲೀಸರು, ಗಿರಿಯನ್ನು ತಮ್ಮ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ADVERTISEMENT

ಜೂಜಾಟಕ್ಕೆ ಬಂದಿದ್ದ: ‘ಜೂಜಾಟ ನಡೆಯುತ್ತಿದ್ದ ಮಾಹಿತಿಯಂತೆ ಸಿಸಿಬಿ ಪೊಲೀಸರು,ಕಂಟ್ರಾಕ್ಟರ್ಸ್‌ ಕ್ಲಬ್‌ ಮೇಲೆ ದಾಳಿ ಮಾಡಿದ್ದರು. ಜೂಜಾಟದಲ್ಲಿ ತೊಡಗಿದ್ದವರನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಅವರಲ್ಲಿ ಒಬ್ಬಾತ ಗಿರಿ ಎಂಬುದು ಯಾರಿಗೂ ಗೊತ್ತಿರಲಿಲ್ಲ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಕ್ಲಬ್‌ನ ಎರಡೂ ಬಾಗಿಲುಗಳನ್ನು ಬಂದ್ ಮಾಡಿ ಎಲ್ಲರ ಹೆಸರು ಹಾಗೂ ವಿಳಾಸ ಸಂಗ್ರಹಿಸಲಾಗುತ್ತಿತ್ತು. ಇನ್‌ಸ್ಪೆಕ್ಟರ್ ಶ್ರೀಧರ್ ಪೂಜಾರ ಅವರೇ ಕುಣಿಗಲ್ ಗಿರಿಯನ್ನು ಗುರುತಿಸಿ ವಿಚಾರಿಸಿದಾಗಲೇ ಆತ ಸಿಕ್ಕಿಬಿದ್ದ. ಜೂಜಾಟ ಆಡಲೆಂದೇ ಆತ ಕ್ಲಬ್‌ಗೆ ಬಂದಿದ್ದ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.