ADVERTISEMENT

ಎಸ್‌ಟಿಗೆ ಕುರುಬರ ಸೇರ್ಪಡೆ ಪಕ್ಷಾತೀತ ಹೋರಾಟಕ್ಕೆ ನಿರ್ಧಾರ

ಒಗ್ಗಟ್ಟು ಪ್ರದರ್ಶಿಸಿದ ನಾಯಕರು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 23:40 IST
Last Updated 20 ಮಾರ್ಚ್ 2020, 23:40 IST

ಬೆಂಗಳೂರು: ಕುರುಬ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಡೆದ ಸಭೆಯಲ್ಲಿ ಸಮುದಾಯದ ಎಲ್ಲ ಪಕ್ಷದ ನಾಯಕರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ‘ಕಾಶ್ಮೀರ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದಹಲವು ರಾಜ್ಯಗಳಲ್ಲಿ ಕುರುಬರನ್ನು ಎಸ್‌ಟಿಗೆ ಸೇರಿಸಲಾಗಿದೆ. ರಾಜ್ಯದಲ್ಲಿನ ಕುರುಬರನ್ನು ಈ ಪಂಗಡಕ್ಕೆ ಸೇರಿಸಲು ಹೋರಾಟ ನಡೆಸಲಾಗುವುದು. ನಾವೆಲ್ಲರೂ (ನಾಯಕರು) ಒಗ್ಗೂಡಿ ಇರುತ್ತೇವೆ. ಸಮುದಾಯದ ನಾಯಕರ ಒಗ್ಗಟ್ಟಿಗೆ ಸಂಬಂಧಿಸಿ ಯಾರೂ ಸಂಶಯ ಪಡುವುದು ಬೇಡ’ ಎಂದರು.

ಜೆಡಿಎಸ್‌ ಶಾಸಕ ಬಂಡೆಪ್ಪ ಕಾಶೆಂಪೂರ, ‘1970ರಿಂದಲೂ ಈ ಬೇಡಿಕೆ ಇದೆ. ಅಲ್ಲದೆ,1986ರಲ್ಲಿಯೇ ಶೈಕ್ಷಣಿಕ ಉದ್ದೇಶಕ್ಕೆ ಕುರುಬ ಸಮಾಜವನ್ನು ‘ಕಾಡು ಕುರುಬ’ ಎಂದು ಪರಿಗಣಿಸಿ ಸರ್ಕಾರ ಆದೇಶ ನೀಡಿತ್ತು’ ಎಂದು ಹೇಳಿದರು.

ADVERTISEMENT

ಬಿಜೆಪಿ ಮುಖಂಡ ಎಚ್. ವಿಶ್ವನಾಥ್, ‘ಈ ಸಂಬಂಧ ಈಗಾಗಲೇ ಹಲವು ಬಾರಿ ಹೋರಾಟ ಮಾಡಲಾಗಿದೆ. ಈಗ ಹೋರಾಟದ ರೂಪು–ರೇಷೆ ಬದಲಾಯಿಸುವ ಅಗತ್ಯವಿದೆ. ಎಲ್ಲ ನಾಯಕರು ಒಗ್ಗೂಡಿ ಹೋರಾಡಿದರೆ ಖಂಡಿತ ಫಲ ಸಿಗಲಿದೆ’ ಎಂದರು.

‘ಈಗಾಗಲೇ ರಾಷ್ಟ್ರೀಯ ಎಸ್‌ಟಿ ಹೋರಾಟ ಸಮಿತಿ ರಚಿಸಲಾಗಿದ್ದು, ರಾಷ್ಟ್ರಮಟ್ಟದಲ್ಲಿ ಮುಂದಿನ ಹೋರಾಟ ಹೇಗಿರಬೇಕು ಎಂಬುದನ್ನು ಸಮಿತಿ ತೀರ್ಮಾನಿಸಲಿದೆ’ ಎಂದರು.

ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಎಚ್.ಎಂ. ರೇವಣ್ಣ, ‘ಕುರುಬರು ಒಂದಾಗಿ ಹೋದರೆ ಎಲ್ಲವೂ ಸಿದ್ಧಿಸುತ್ತವೆ ಎಂಬುದು ನಮ್ಮ ಆಶಯ. ಮುಂದಾಲೋಚನೆ ಮಾಡಿ ಈ ಹೋರಾಟ ನಡೆಸಿದರೆ ನಮ್ಮ ಮುಂದಿನ ಪೀಳಿಗೆಗೆ ಅನುಕೂಲ ಆಗಲಿದೆ.ಎಲ್ಲ ಹಿರಿಯರು ಕೈ ಜೋಡಿಸಿದರೆ ನಮ್ಮ ಗುರಿ ಮುಟ್ಟಲು ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.