ADVERTISEMENT

ಕುರುಹಿನಶೆಟ್ಟಿ ಸೊಸೈಟಿ ವಂಚನೆ: ಸಾಲಗಾರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 19:31 IST
Last Updated 6 ಡಿಸೆಂಬರ್ 2022, 19:31 IST
   

ಬೆಂಗಳೂರು: ಠೇವಣಿದಾರರಿಂದ ಸುಮಾರು ₹ 100 ಕೋಟಿ ಸಂಗ್ರಹಿಸಿ ವಂಚಿಸಿದ್ದ ಆರೋಪದಡಿ ಕುರಹಿನಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ರಾಕೇಶ್ ಸಾವಿ (51) ಎಂಬುವರನ್ನು ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬಳ್ಳಾರಿ ಎಸ್‌.ಎನ್‌. ಪೇಟೆ ಸಿದ್ದಿಕಿ ಕಾಲೊನಿ ನಿವಾಸಿ ರಾಕೇಶ್ ಸಾವಿ, ಸೊಸೈಟಿಯಲ್ಲಿ ಸಾಲ ಪಡೆದು ವಾಪಸು ಪಾವತಿಸಿರಲಿಲ್ಲ. ಇದರಿಂದಾಗಿ ಸೊಸೈಟಿಗೆ ನಷ್ಟವಾಗಿತ್ತು. ಠೇವಣಿದಾರರಿಗೆ ಹಣ ವಾಪಸು ನೀಡಲು ಸಾಧ್ಯವಾಗಿರಲಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘2011ರಿಂದ 2022ರ ಅವಧಿಯಲ್ಲಿ ಸಾಲ ಸಮಿತಿಯಲ್ಲಿ ಸರಿಯಾಗಿ ದಾಖಲೆಗಳನ್ನು ಪರಿಶೀಲನೆ ಮಾಡದೇ ನಿಯಮಬಾಹಿರವಾಗಿ ಹಲವರಿಗೆ ಸಾಲ ಮಂಜೂರು ಮಾಡಲಾಗಿತ್ತು. ಆರೋಪಿ ರಾಕೇಶ್ ಸಹ ಕೋಟಿಗೂ ಹೆಚ್ಚು ಸಾಲ ಪಡೆದುಕೊಂಡಿದ್ದರು. ಕೆಲ ಸುಸ್ತಿದಾರರಿಗೂ ಕೋಟಿಗೂ ಹೆಚ್ಚು ಸಾಲ ನೀಡಲಾಗಿತ್ತು. ಠೇವಣಿದಾರರ ಹಣವೆಲ್ಲ ಸಾಲಕ್ಕೆ ಹೋಗಿತ್ತು.’

ADVERTISEMENT

‘ಸಾಲ ಪಡೆದಿದ್ದವರು ನಿಗದಿತ ದಿನದೊಳಗೆ ಮರುಪಾವತಿ ಮಾಡಿರಲಿಲ್ಲ. ಇದರಿಂದಾಗಿ ಸೊಸೈಟಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಸೊಸೈಟಿಯಲ್ಲಿ ಠೇವಣಿ ಇರಿಸಿದ್ದ ಜನ, ಹಣ ವಾಪಸು ನೀಡುವಂತೆ ಒತ್ತಾಯಿಸಲಾರಂಭಿಸಿದ್ದರು. ಆದರೆ, ಅವರಿಗೆ ಹಣ ನೀಡಿರಲಿಲ್ಲ. ಇದರಿಂದ ಬೇಸತ್ತ ಠೇವಣಿದಾರರು, ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಅಧ್ಯಕ್ಷ ಬಿ.ಎಲ್. ಶ್ರೀನಿವಾಸ್ (64), ಉಪಾಧ್ಯಕ್ಷ ಬಿ. ಈಶ್ವರ್ (71), ಸಾಲಗಾರರಾದ ದಯಾನಂದ ಹೆಗ್ಡೆ (50), ವಿ. ನಾಗೇನಹಳ್ಳಿಯ ಪಿ. ಚಂದ್ರಶೇಖರ್ (55) ಹಾಗೂ ಸುರಭಿ ಚಿಟ್ಸ್ ಸಂಸ್ಥೆಯ ಬಿ.ಟಿ. ಮೋಹನ್ (75) ಅವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಇದೀಗ ರಾಕೇಶ್‌ನನ್ನು ಬಂಧಿಸಲಾಗಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.