ADVERTISEMENT

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಪ್ರದಾನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 20:10 IST
Last Updated 9 ಜನವರಿ 2026, 20:10 IST
<div class="paragraphs"><p>ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2025ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ</p></div>

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2025ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ

   

ಬೆಂಗಳೂರು: ‘ದುಷ್ಟ, ದೂರ್ತ ರಾಜಕಾರಣಿಗಳು ದೇಶ, ಜನಾಂಗಗಳ ನಡುವೆ ದ್ವೇಷ ಹುಟ್ಟು ಹಾಕುತ್ತಿದ್ದಾರೆ. ಇದರ ನಡುವೆ ವಿಶ್ವದಲ್ಲಿ ಒಳಿತಿನ ಕಡೆಗೆ ಮುನ್ನೆಡೆಸುವ ಅರಿವನ್ನು ಅತ್ಯುತ್ತಮ ಸಾಹಿತ್ಯ, ಚಿಂತನೆಗಳ ಅನುವಾದದ ಮೂಲಕ ಮೂಡಿಸಬೇಕಿದೆ’ ಎಂದು ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ತಿಳಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಶುಕ್ರವಾರ ಆಯೋಜಿಸಿದ್ದ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನವನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ADVERTISEMENT

‘ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ದುರಿತ ಕಾಲದಲ್ಲಿ ನಾವಿದ್ದೇವೆ. ವಿಷಮ ವಾತಾವರಣ ತುಂಬಿಕೊಂಡಿದೆ. ಸಣ್ಣ ಮನಸ್ಸಿನವರು ಅಧಿಕಾರಕ್ಕೆ ಬಂದಿರುವುದರಿಂದ ಹಿಂಸೆ, ಕ್ರೌರ್ಯ, ರಕ್ತಪಾತದ ಮೂಲಕ ದೇಶ ಒಡೆಯುವ ಪ್ರಕ್ರಿಯೆಗಳು ನಡೆಯುತ್ತಿವೆ. ಇಂತಹ ಸನ್ನಿವೇಶದಲ್ಲಿ ಸಾಂಸ್ಕೃತಿಕ ವಲಯ ಮಾತ್ರ ಮನಸ್ಸುಗಳನ್ನು ಬೆಸೆಯುವ ಶಕ್ತಿ ಹೊಂದಿದೆ. ಜಗತ್ತಿನ ನಾನಾ ಭಾಗಗಳ ಸಾಹಿತ್ಯವು ಅನುವಾದಗೊಂಡರೆ ವಿಶ್ವಶಾಂತಿಗೂ ದಾರಿಯಾಗಬಹುದು’ ಎಂದು ತಿಳಿಸಿದರು.

ಸಾಹಿತ್ಯ ಕ್ಷೇತ್ರದಲ್ಲೂ ಅನುವಾದಕ್ಕೆ ಮಹತ್ವವಿದೆ. ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳು ಇದ್ದಂತೆ. ಅವರು ಇಂಗ್ಲಿಷ್ ಮಾತ್ರವಲ್ಲದೇ ವಿಶ್ವದ ಹಲವು ಭಾಷೆಗಳ ಕೃತಿಗಳನ್ನು ಇತರೆ ಭಾಷೆಗಳಿಗೆ ಅನುವಾದಿಸುತ್ತಾರೆ. ಮೂಲ ಲೇಖಕನ ಆಶಯ, ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡು ಇನ್ನೊಂದು ಭಾಷೆಗೆ ಅನುವಾದ ಮಾಡುವುದು ಎರಡು ಭಾಷೆಯ ನಡುವೆ ಸಂಬಂಧ ಬೆಸೆಯುವ ಪ್ರಯತ್ನ’ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಲೇಖಕಿ ಕೆ.ಆರ್‌.ಸಂಧ್ಯಾರೆಡ್ಡಿ ಮಾತನಾಡಿ, ‘ಬಾನು ಮುಷ್ತಾಕ್‌ ಅವರ ಎದೆಯ ಹಣತೆ ಕೃತಿಯನ್ನು ದೀಪಾ ಭಾಸ್ತಿ ಅವರು ಹಾರ್ಟ್‌ ಲ್ಯಾಂಪ್‌ ಹೆಸರಲ್ಲಿ ಅನುವಾದ ಮಾಡಿದ್ದು, ಇದಕ್ಕೆ ಬೂಕರ್‌ ಪ್ರಶಸ್ತಿ ಬಂದಿತು. ಕನ್ನಡಿಗರು ಇದನ್ನು ಸಂಭ್ರಮಿಸಿದ್ದರಿಂದ ಅನುವಾದಕ್ಕೂ ಬೆಲೆ ಬಂದಿತು. ವಿಜ್ಞಾನ, ತಾಂತ್ರಿಕ ಕ್ಷೇತ್ರಗಳಲ್ಲೂ ಅನುವಾದಕ್ಕೆ ವಿಪುಲ ಅವಕಾಶಗಳಿದ್ದು, ಈ ಕ್ಷೇತ್ರಗಳ ಕಡೆಯೂ ಗಮನ ನೀಡಬೇಕು’ ಎಂದು ಸಲಹೆ ನೀಡಿದರು.

‌‌ಗೌರವ ಪ್ರಶಸ್ತಿಯನ್ನು ಜೆ.ವಿ.ಕಾರ್ಲೊ, ಕೆ.ಆರ್.ಸಂಧ್ಯಾರೆಡ್ಡಿ, ವನಮಾಲಾ ವಿಶ್ವನಾಥ್‌, ವಿಠಲರಾವ್‌. ಟಿ. ಗಾಯಕ್ವಾಡ್‌, ಜೆ.ಪಿ.ದೊಡಮನಿ, 2024ನೇ ಸಾಲಿನ ಪುಸ್ತಕ ಬಹುಮಾನವನ್ನು ನಟರಾಜ ಹೊನ್ನವಳ್ಳಿ, ಆರ್‌.ಸದಾನಂದ, ಆರ್‌.ಕಾರ್ತಿಕ್‌, ಮಲ್ಲೇಶಪ್ಪ ಸಿದ್ರಾಂಪೂರ, ಎನ್‌.ದೇವರಾಜ್‌ ಅವರಿಗೆ ಪ್ರದಾನ ಮಾಡಲಾಯಿತು.

ಅಕಾಡೆಮಿ ಸದಸ್ಯರಾದ ಡಿ.ಕೆ. ಚಿತ್ತಯ್ಯ ಪೂಜಾರ್‌, ಎಂ.ಎಸ್. ಶೇಖರ್, ನಾರಾಯಣಘಟ್ಟ, ಷಾಕಿರಾ ಖಾನಂ, ಪಿ. ಭಾರತಿ ದೇವಿ, ಎಸ್‌. ಗಂಗಾಧರಯ್ಯ, ಜಾಜಿ ದೇವೇಂದ್ರಪ್ಪ, ಕರಿಯಪ್ಪ ಮಾಳಿಗೆ, ಬಿ.ಎಲ್‌. ರಾಜು, ರಿಜಿಸ್ಟ್ರಾರ್ ದತ್ತಪ್ಪ ಸಾಗನೂರ ಹಾಜರಿದ್ದರು.

ಪ್ರಾಧಿಕಾರದಿಂದ ಆಡಿಯೊ ಬುಕ್‌

‘ಎರಡು ದಶಕದ ಹಿಂದೆ ಕರ್ನಾಟಕ ಅನುವಾದ ಅಕಾಡೆಮಿಯಾಗಿ ಆರಂಭಗೊಂಡು ಈಗ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ರೂಪ ಪಡೆದಿದೆ. ಅನುವಾದ ಕೃತಿಗಳ ಪ್ರಕಟಣೆ ಕಮ್ಮಟ  ಫೆಲೋಶಿಪ್‌ಗಳ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಪ್ರಮುಖ ಸಾಹಿತಿಗಳ ಬರಹಗಳನ್ನು ಇ–ಬುಕ್‌ ಹಾಗೂ ಆಡಿಯೊ ಬುಕ್‌ಗಳನ್ನು ಸಿದ್ದಪಡಿಸುವ ಯೋಜನೆಯನ್ನು ಪ್ರಾಧಿಕಾರ ರೂಪಿಸುತ್ತಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ತಿಳಿಸಿದರು.