ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕಾರ್ಮಿಕರ ದುಡಿಮೆಯ ಅವಧಿಯನ್ನು 10 ಗಂಟೆಗೆ ಹೆಚ್ಚಿಸುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಆದರೆ, ಸರ್ಕಾರದ ಈ ಚಿಂತನೆಯನ್ನು ಕೈಗಾರಿಕೋದ್ಯಮಿಗಳ ಸಂಘಟನೆಗಳು ಸ್ವಾಗತಿಸಿವೆ.
ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ಮಾಡುವ ಕುರಿತು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅಧ್ಯಕ್ಷತೆಯಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಜತೆ ಬುಧವಾರ ಸಭೆ ನಡೆಯಿತು.
ದುಡಿಮೆಯ ಅವಧಿ ಹೆಚ್ಚಿಸುವ ಸಂಬಂಧ ಕಾಯ್ದೆ ತಿದ್ದುಪಡಿಗೆ ಮುಂಬರುವ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಕಾರ್ಮಿಕ ಇಲಾಖೆ ಮುಂದಾಗಿದೆ. ಇದರ ಜತೆಗೆ ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ತಿದ್ದುಪಡಿ ಬಗ್ಗೆಯೂ ಚರ್ಚೆ ಆರಂಭವಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಏನಿದು ಪ್ರಸ್ತಾವ?: 20ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಉತ್ಪಾದನಾ ಘಟಕಗಳಲ್ಲಿ ದಿನದ ಕೆಲಸದ ಅವಧಿಯನ್ನು 8ರಿಂದ 10 ಗಂಟೆಗೆ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಕಾಯ್ದೆ ರೂಪಿಸಿದೆ. ಅದಕ್ಕೆ ಪೂರಕವಾಗಿ ರಾಜ್ಯಗಳು ಕಾನೂನು ತಿದ್ದುಪಡಿ ಮಾಡಬೇಕಿದೆ. ರಾಜ್ಯದಲ್ಲಿಯೂ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದಿಂದ ಕಾರ್ಮಿಕ ಇಲಾಖೆಯು ಸಭೆ ಆಯೋಜಿಸಿತ್ತು. ಆದರೆ, ಈ ತಿದ್ದುಪಡಿಗೆ ಕಾರ್ಮಿಕ ಸಂಘಟನೆಗಳು ಬಲವಾಗಿ ವಿರೋಧ ವ್ಯಕ್ತಪಡಿಸಿದ ಕಾರಣ ಮತ್ತೊಮ್ಮೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.
‘8 ಗಂಟೆ ದುಡಿಮೆ ಎಂಬುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಇರುವ ನಿಯಮ. ಸ್ವಾತಂತ್ರ್ಯಪೂರ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕಾರ್ಮಿಕ ಸಚಿವರಾಗಿದ್ದಾಗ ಭಾರತದಲ್ಲಿಯೂ ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. ಕಾಯ್ದೆ ತಿದ್ದುಪಡಿ ಮಾಡಿದರೆ ಕಾರ್ಮಿಕರ ಶೋಷಣೆ ಆಗಲಿದೆ. ಯಾವುದೇ ಕಾರಣಕ್ಕೂ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಬಾರದು. ಒಂದು ಸಂಸ್ಥೆಯಲ್ಲಿ 10 ಮತ್ತು ಅದಕ್ಕಿಂತ ಕಡಿಮೆ ಕಾರ್ಮಿಕರು ಇದ್ದಾಗ ಕಾರ್ಮಿಕ ನಿಯಮಾವಳಿಯಿಂದ ಹೊರಗಿಡಬೇಕು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ವರಲಕ್ಷ್ಮೀ ಮತ್ತು ಇತರರು ಆಗ್ರಹಿಸಿದರು. ‘ಈ ಬಗ್ಗೆ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಮಾಡುತ್ತೇವೆ’ ಎಂದೂ ಹೇಳಿದರು.
‘ಇದು ಕಾರ್ಮಿಕರ ಪರವಾಗಿದೆ. ಹೆಚ್ಚುವರಿಯಾಗಿ ಇನ್ನೊಂದು ಗಂಟೆ ಕೆಲಸ ಮಾಡಿದರೆ ಕಾರ್ಮಿಕರಿಗೆ ಹೊರೆಯಾಗುವುದಿಲ್ಲ. ಅಲ್ಲದೆ, ಹೆಚ್ಚುವರಿ ಕೆಲಸ ಮಾಡಿದ್ದಕ್ಕಾಗಿ ಅವರಿಗೆ ವಾರದ ರಜೆಯ ಜೊತೆಗೆ, ಇನ್ನೂ ಒಂದು ರಜೆ ಹೆಚ್ಚುವರಿಯಾಗಿ ಸಿಗಲಿದೆ. ಸರ್ಕಾರದ ಚಿಂತನೆ ಸರಿ ಇರುವುದರಿಂದ ಈ ತಿದ್ದುಪಡಿಗಳನ್ನು ಸ್ವಾಗತಿಸುತ್ತೇವೆ’ ಎಂದು ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರ ಪರವಾಗಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದರು.
ಇಂಟಕ್, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಎಐಸಿಸಿಟಿಯು, ಟಿಯುಸಿಸಿ, ಎಚ್‌ಎಂಕೆಪಿ ಮುಂತಾದ ಕಾರ್ಮಿಕ ಸಂಘಟನೆಯ ಮುಖಂಡರು, ಎಫ್‌ಕೆಸಿಸಿಐ, ಬಿಸಿಐಸಿ, ಕೆಇಎ, ಕ್ಲಾತ್ ಮರ್ಚೆಂಟ್ ಅಸೋಸಿಯೇಶನ್, ಗ್ರೇಟರ್ ಬೆಂಗಳೂರು ಎಂಪ್ಲಾಯೀಸ್ ಅಸೋಸಿಯೇಶನ್ ಸಹಿತ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.