ADVERTISEMENT

ಸಮಸ್ಯೆ ಪರಿಹಾರಕ್ಕೆ ತ್ರಿಪಕ್ಷೀಯ ವ್ಯವಸ್ಥೆ

ಕಾರ್ಮಿಕ ಸಂಘಟನೆಗಳು, ಉದ್ಯಮಗಳ ಜತೆಗೆ ಸಚಿವ ಸುರೇಶ್‌ ಕುಮಾರ್ ಸಭೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 2:14 IST
Last Updated 22 ಅಕ್ಟೋಬರ್ 2019, 2:14 IST
ಎಸ್‌.ಸುರೇಶ್‌ ಕುಮಾರ್‌
ಎಸ್‌.ಸುರೇಶ್‌ ಕುಮಾರ್‌   

ಬೆಂಗಳೂರು: ಕಾರ್ಮಿಕರು ಮತ್ತು ಉದ್ಯಮಗಳ ನಡುವಿನ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಉದ್ಯೋಗಿಗಳು, ಉದ್ಯೋಗದಾತರು ಮತ್ತು ಸರ್ಕಾರವನ್ನು ಒಳಗೊಂಡ ತ್ರಿಪಕ್ಷೀಯ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲು ಸರ್ಕಾರ ಒಪ್ಪಿಕೊಂಡಿದೆ.

ವಿಕಾಸಸೌಧದಲ್ಲಿ ಸೋಮವಾರ ವಿವಿಧ ಕಾರ್ಮಿಕ ಸಂಘಟನೆಗಳು, ಉದ್ಯಮಗಳೊಂದಿಗೆ ದಿನವಿಡೀ ನಡೆಸಿದ ಸಭೆಯ ಬಳಿಕ ಕಾರ್ಮಿಕ ಸಚಿವ ಎಸ್. ಸುರೇಶ್‌ ಕುಮಾರ್ ಈ ವಿಷಯ ತಿಳಿಸಿದರು.

ಇದರ ಭಾಗವಾಗಿ ನ್ಯಾಯಾಲಯದ ಮೆಟ್ಟಿಲು ಏರುವುದಕ್ಕೆ ಮೊದಲಾಗಿ ಸಂಧಾನ ಪ್ರಕ್ರಿಯೆಗೂ ಸರ್ಕಾರ ವ್ಯವಸ್ಥೆ ಮಾಡಿಕೊಡಲಿದೆ. ಉದ್ಯಮಗಳು ಇದರ ಬಗ್ಗೆಯೂ ಬೇಡಿಕೆ ಇಟ್ಟಿದ್ದವು ಎಂದು ಹೇಳಿದರು.

ADVERTISEMENT

ಕಾರ್ಮಿಕರ ಶೋಷಣೆಗೆ ತಡೆ: ಗುತ್ತಿಗೆ ಕಾರ್ಮಿಕರಿಗೆ ಸಂಬಳ, ಸೌಲಭ್ಯ ಮತ್ತಿತರ ವಿಚಾರಗಳಲ್ಲಿ ಆಗುತ್ತಿರುವ ಅನ್ಯಾಯ ನಿವಾರಿಸಲು ಇತರ ಕೆಲವು ರಾಜ್ಯಗಳಲ್ಲಿ ಇರುವಂತೆ ಗುತ್ತಿಗೆ ಕಾರ್ಮಿಕರ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗುವುದು. ಅದರಲ್ಲಿ ಕೋರ್‌ ಆಕ್ಟಿವಿಟೀಸ್‌ ಮತ್ತು ನಾನ್‌ ಕೋರ್‌ ಆಕ್ಟಿವಿಟೀಸ್ ಎಂಬ ಎರಡು ವಿಭಾಗಗಳಿದ್ದು, ಅವುಗಳನ್ನೂ ಸೇರಿಸಿಕೊಂಡು ಕಾಯ್ದೆ ರೂಪಿಸಲಾಗುವುದು ಎಂದರು.

ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆಯ ಸಮಸ್ಯೆಯೂ ಇದೆ. ಆಯಾ ಉದ್ದಿಮೆಗಳಲ್ಲಿ ಕಾರ್ಮಿಕರ ಪರ ಹೋಗಿ ಬೇಡಿಕೆ ಸಲ್ಲಿಸಲು ಒಂದು ಧ್ವನಿ ಬೇಕು. ಇದರ ಬಗ್ಗೆಯೂ ಸರ್ಕಾರ ಹೆಚ್ಚಿನ ಗಮನ ಹರಿಸಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಅಸಂಘಟಿತ ವಲಯ: ರಾಜ್ಯದಲ್ಲಿ 2 ಕೋಟಿಯಷ್ಟು ಅಸಂಘಟಿತ ವಲಯದ ಕಾರ್ಮಿಕರಿದ್ದು, ಅವರಿಗೆ ಕೆಲಸದ ಭದ್ರತೆ, ಸೌಲಭ್ಯ ನೀಡಲು ಕೆಲವೊಂದು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ನವೆಂಬರ್‌ 2ರ ಬಳಿಕ ಜವಳಿ, ಐಟಿ ಸಹಿತ ಪ್ರಮುಖ ಉದ್ಯಮಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ ಕಾರ್ಮಿಕರ ಸಮಸ್ಯೆಗಳು, ಉದ್ಯಮಗಳ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಉದ್ಯಮಗಳ ಬೇಡಿಕೆಯಂತೆ ಡಿಸೆಂಬರ್‌ನಲ್ಲಿ ಕರ್ನಾಟಕ ಕಾರ್ಮಿಕ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.

ಪೀಣ್ಯಕ್ಕೆ ಭೇಟಿ: ಉದ್ಯಮಗಳು, ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡುವುದಕ್ಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಕಾರ್ಮಿಕರ ಶೋಷಣೆ ನಡೆಯುತ್ತಿದ್ದು,ಕಾರ್ಮಿಕ ಸಂಘಟನೆಗಳಿಗೆ ಬೆಲೆ ನೀಡದೆ ಇರುವುದೂ ಸರ್ಕಾರದ ಗಮನಕ್ಕೆ ಬಂದಿದೆ. ಐಟಿ ಉದ್ಯಮಗಳ ಜತೆಗೆ ಪ್ರತ್ಯೇಕ ಸಭೆ ನಡೆಸುವಾಗ ಈ ವಿಷಯ ಪ್ರಸ್ತಾಪಿಸಿ, ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.