ADVERTISEMENT

ಮಳೆ ಕುಂಠಿತ: ಮೀನುಗಾರಿಕೆಗೆ ಹೊಡೆತ

ನೆಲಮಂಗಲ: ಈ ವರ್ಷ 14 ಲಕ್ಷ ಮೀನು ಮರಿ ಬಿತ್ತನೆಯ ಗುರಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:43 IST
Last Updated 16 ಆಗಸ್ಟ್ 2019, 19:43 IST
ಮೀನುಗಾರಿಕೆಗೆ ಮೀಸಲಿಟ್ಟಿರುವ ಬಿಲ್ಲಿನ ಕೋಟೆಯ ಕೆರೆ
ಮೀನುಗಾರಿಕೆಗೆ ಮೀಸಲಿಟ್ಟಿರುವ ಬಿಲ್ಲಿನ ಕೋಟೆಯ ಕೆರೆ   

ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಒಳನಾಡು ಮೀನುಗಾರಿಕೆ ಮೇಲೂ ಪರಿಣಾಮ ಬೀರಿದೆ.

ತಾಲ್ಲೂಕಿನ 21 ಕೆರೆಗಳನ್ನು ಮೀನುಗಾರಿಕೆಗೆ ಗುರುತಿಸಲಾಗಿದೆ. ಈ ಪೈಕಿ, 7 ಕೆರೆಗಳು ಬತ್ತಿ ಹೋಗಿವೆ. ಉಳಿದ 14 ಕೆರೆಗಳಲ್ಲಿ ಮೀನುಗಾರಿಕೆ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮೀನು ಮರಿ ಬಿತ್ತನೆ ಗುರಿ ಕುಂಠಿತವಾಗಿದ್ದು, ಮೀನುಗಾರಿಕೆ ನಂಬಿದ ಕುಟುಂಬಗಳು ಮಳೆಗಾಗಿ ಅಗಸದತ್ತ ಮುಖ ಮಾಡುವಂತಾಗಿದೆ.

ಕಳೆದ ವರ್ಷ ತಾಲ್ಲೂಕಿನ 14 ಕೆರೆಗಳ ಪೈಕಿ ಭಿನ್ನಮಂಗಲ (ಅರಿಶಿನಕುಂಟೆ), ಟಿ.ಬೇಗೂರು, ಬರದಿ, ದೇವರಹೊಸಹಳ್ಳಿ, ಹಳೇ ನಿಜಗಲ್, ಮದಗ, ಬಿಲ್ಲಿನಕೋಟೆ, ಸೊಂಡಿಲವಾಡಿ, ಕಂಬಾಳು, ನಿಡವಂದ, ಕುಲವನಹಳ್ಳಿ ಹಾಗೂ ಹೊನ್ನರಾಯನಹಳ್ಳಿ ಸೇರಿದಂತೆ 12 ಕೆರೆಗಳಲ್ಲಿ ಹರಾಜು ಪ್ರಕ್ರಿಯೆ ನಡೆದು ಅಲ್ಲಿ ಮೀನು ಸಾಕಣೆ ಮಾಡಲಾಗಿತ್ತು. 19 ಲಕ್ಷ ಮೀನು ಮರಿ ಬಿತ್ತನೆ ಗುರಿಯ ಪೈಕಿ 8 ಲಕ್ಷ ಗುರಿ ಸಾಧನೆಯಾಗಿತ್ತು. 13.49 ಲಕ್ಷ ವರಮಾನ ಬಂದಿತ್ತು.

ADVERTISEMENT

ಪ್ರಸಕ್ತ ಸಾಲಿನಲ್ಲಿ 14 ಲಕ್ಷ ಮೀನು ಮರಿ ಬಿತ್ತನೆಯ ಗುರಿಯಿದ್ದು, ಮಳೆ ಕೊರತೆಯಿಂದ ಈವರೆಗೆ ಯಾವ ಕೆರೆಗಳಲ್ಲೂ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಗುತ್ತಿಗೆದಾರರಲ್ಲಿ ಆತಂಕ ಎದುರಾಗಿದೆ.

ಮೀನುಗಾರಿಕೆಗೆ ಐದು ವರ್ಷಗಳಿಗೆ ಹರಾಜು ಪಡೆದುಕೊಳ್ಳುವುದರಿಂದ ಕೆರೆಗಳಲ್ಲಿ ನೀರಿನ ಲಭ್ಯತೆ ಇರಲಿ, ಇಲ್ಲದಿರಲಿ ಇಲಾಖೆಗೆ ಗುತ್ತಿಗೆ ಹಣ ಬಂದಿರುತ್ತದೆ. ಬರ ಎದುರಾದರೆ ಬವಣೆ ಎದುರಿಸುವವರು ಮಾತ್ರ ಗುತ್ತಿಗೆದಾರರು. ವಾರ್ಷಿಕ ಮಳೆ ನಂಬಿ ನೂರಾರು ಮೀನುಗಾರರು ಹರಾಜಿನಲ್ಲಿ ಪಾಲ್ಗೊಂಡು ಬಿಡ್‌ ಪಡೆಯುತ್ತಾರೆ. ಮಳೆ ಕೈಕೊಟ್ಟರೆ ಅವರಿಗೆ ಭಾರೀ ಹೊಡೆತ. ಕೆರೆ ಗುತ್ತಿಗೆ ಪಡೆದ ಮೀನುಗಾರರು ಐದು ವರ್ಷ ಕಾಲ ಪ್ರತಿ ವರ್ಷವೂ ಶೇ 5ರಷ್ಟು ಹೆಚ್ಚುವರಿ ಹಣ ನೀಡಿ ನವೀಕರಣ ಮಾಡಿಸಬೇಕಾಗುತ್ತದೆ.

ಪ್ರತಿ ವರ್ಷದಂತೆ ಈ ವರ್ಷವೂ 14 ಕೆರೆಗಳ ಗುತ್ತಿಗೆ ನವೀಕರಣ ಆಗಬೇಕು. ಅದರಲ್ಲಿ 9 ಕೆರೆಗಳ ಗುತ್ತಿಗೆ ನವೀಕರಣ ಆಗಿದೆ. ಗೊಲ್ಲಹಳ್ಳಿ ಹಾಗೂ ಕಂಬಾಳು ಕೆರೆಗಳಲ್ಲಿ ನೀರಿಲ್ಲ. ಉಳಿದ ಕೆರೆಗಳಲ್ಲಿ ನೀರಿದೆ. ಗುತ್ತಿಗೆ ನವೀಕರಣ ಮಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕಿ ಅಮೃತಾ ತಿಳಿಸಿದರು.

’ನೆಲಮಂಗಲ ತಾಲ್ಲೂಕಿನ ಮೀನುಗಾರಿಕೆಗೆ ಒಳಪಟ್ಟ ಬಹುತೇಕ ಕೆರೆಗಳು ನೀರಿಲ್ಲದೆ ಒಣಗಿವೆ. ಒಳ್ಳೆಯ ಮಳೆಯಾದರೆ ಮೀನುಗಾರಿಕೆಗೆ ಸಾಕಷ್ಟು ಉಪಯೋಗವಾಗುತ್ತದೆ’ ಎಂದರು ಗುತ್ತಿಗೆದಾರ ತೊಣಚಿನಕುಪ್ಪೆಯ ಟಿ.ವಿ.ಗೋವಿಂದಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.