ADVERTISEMENT

ಕೆರೆ ಹುಡುಕುವ ಕೆಲಸ ‘ನೀರಿಗೆ’

ಕೆರೆಗಳ ನಿಖರ ಲೆಕ್ಕವೇ ಇಲ್ಲ . ಅಭಿವೃದ್ಧಿ ಹೆಸರಲ್ಲಿ ಲೂಟಿ, ಹೈಕೋರ್ಟ್‌ ಚಾಟಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 19:56 IST
Last Updated 17 ಜೂನ್ 2019, 19:56 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಎಷ್ಟು ಕೆರೆಗಳಿವೆ ಎಂಬುದನ್ನು ಖಚಿತವಾಗಿ ಗುರುತಿಸಿ ಅವುಗಳ ಪುನರುಜ್ಜೀವನಕ್ಕೆ ಅಗತ್ಯ ಶಿಫಾರಸುಗಳನ್ನು ನೀಡುವ ಜವಾಬ್ದಾರಿಯನ್ನು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಗೆ (ನೀರಿ) ವಹಿಸಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

‘ಬಿಬಿಎಂಪಿ ವ್ಯಾಪ್ಯಿಯಲ್ಲಿನ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು’ ಎಂದು ಕೋರಿ ‘ಸಿಟಿಜನ್ಸ್‌ ಆ್ಯಕ್ಷನ್‌ ಗ್ರೂಪ್‌’ ಕಾರ್ಯದರ್ಶಿ ನೊಮಿತಾ ಚಾಂಡಿ, ‘ಜೆ.ಪಿ ನಗರ 4ನೇ ಹಂತದ ಡಾಲರ್ಸ್‌ ಲೇಔಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ’ದ ಕಾರ್ಯದರ್ಶಿ ಗುಂಡಾ ಭಟ್‌ ಮತ್ತು ‘ಸಮರ್ಪಣಾ’ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ಈ ಮಧ್ಯಂತರ ಆದೇಶ ನೀಡಿದೆ.

ಆದೇಶದ ಮುಖ್ಯಾಂಶಗಳು:

ADVERTISEMENT

* ಕೆರೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಿ ಅವುಗಳ ನಿರ್ವಹಣೆ, ಸಂರಕ್ಷಣೆ ಮಾಡುವ ಹಾಗೂ ಈ ದಿಸೆಯಲ್ಲಿ ಅಧ್ಯಯನ ನಡೆಸುವ ಹೊಣೆಯನ್ನು ಒಂದು ತಿಂಗಳ ಒಳಗೆ ‘ನೀರಿ’ಗೆ ವಹಿಸಬೇಕು.

* ನಾಪತ್ತೆಯಾಗಿರುವ ಕೆರೆಗಳನ್ನು ಗುರುತಿಸಬೇಕು ಮತ್ತು ‘ನೀರಿ’ ಮೂರು ತಿಂಗಳಲ್ಲಿ ತನ್ನ ಅಧ್ಯಯನ ವರದಿ ನೀಡಬೇಕು.

* ಕೆರೆ ಪ್ರದೇಶಗಳ ಒತ್ತುವರಿಯಲ್ಲಿ ಸರ್ಕಾರದ ಕಟ್ಟಡಗಳಿದ್ದರೆ ಹಂತ ಹಂತವಾಗಿ ಅವುಗಳನ್ನು ತೆರವುಗೊಳಿಸಬೇಕು.

* ಅಭಿವೃದ್ಧಿ ಹೆಸರಿನಲ್ಲಿ ಕೆರೆ ಹಾಳು ಮಾಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ.

* ಬೆಂಗಳೂರಿನ ಕೆರೆಗಳನ್ನು ರಕ್ಷಿಸುವಲ್ಲಿ ಸರ್ಕಾರ ಸೇರಿದಂತೆ ಎಲ್ಲ ಸಂಸ್ಥೆಗಳೂ ಸಂಪೂರ್ಣ ವಿಫಲವಾಗಿವೆ.

* ಕೆರೆಗಳು ಸರ್ಕಾರದ ಸ್ವತ್ತು. ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ.

* ಬೆಂಗಳೂರಿನಲ್ಲಿ ಎಷ್ಟು ಕೆರೆಗಳಿವೆ ಎಂಬ ಬಗ್ಗೆ ಯಾವ ಸಂಸ್ಥೆಗಳ ಬಳಿಯಲ್ಲೂ ನಿಖರ ಅಂಕಿ ಅಂಶ ಇಲ್ಲ. ಇದು ಸಖೇದಾಶ್ಚರ್ಯದ ಸಂಗತಿ.

* ಕೆರೆಗಳ ನಾಶದಿಂದಲೇ ನೀರಿನ ಸಂಕಷ್ಟ ಎದುರಾಗಿದೆ.

* ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ನೇತೃತ್ವದ ಸಮಿತಿ ನೀಡಿದ ವರದಿ ಆಧರಿಸಿ 2012ರ ಏ‍ಪ್ರಿಲ್‌ 11 ರಂದು ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಆದರೆ, ಈ ಕುರಿತಂತೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರ ಇಲ್ಲ. ಹೀಗಾಗಿ ಮುಂದಿನ ಎರಡು ತಿಂಗಳಲ್ಲಿ ಈ ಕುರಿತಂತೆ ವರದಿ ಸಲ್ಲಿಸಿ.

‘ಪ್ರತ್ಯೇಕ ದೂರು ಸ್ವೀಕಾರ ಕೇಂದ್ರ ಸ್ಥಾಪಿಸಿ’

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ, ರಾಜಕಾಲುವೆ, ಕೆರೆ ಒತ್ತುವರಿ ಮತ್ತಿತರ ಸಮಸ್ಯೆಗಳ ಬಗ್ಗೆ ದೂರು ನೀಡಲು ಪ್ರತ್ಯೇಕ ದೂರು ಸ್ವೀಕಾರ ವ್ಯವಸ್ಥೆ ಕಲ್ಪಿಸಬೇಕು’ ಎಂದೂ ನ್ಯಾಯಪೀಠ ಆದೇಶಿಸಿದೆ.

‘ಇದಕ್ಕಾಗಿ ಟೋಲ್ ಫ್ರೀ ನಂಬರ್ ನೀಡಬೇಕು. ಈ ಕೇಂದ್ರಕ್ಕೆ ಸಾರ್ವಜನಿಕರು ಇ-ಮೇಲ್ ಮುಖಾಂತರ ಅಥವಾ ಖುದ್ದಾಗಿ ದೂರು ನೀಡುವಂತಿರಬೇಕು. ದೂರು ಸ್ವೀಕಾರದ ನಂತರ ತಕ್ಷಣವೇ ಕ್ರಮ ಕೈಗೊಂಡು ದೂರು ನೀಡಿದವರಿಗೆ ಮಾಹಿತಿ ಒದಗಿಸಬೇಕು’ ಎಂದೂ ನ್ಯಾಯಪೀಠ ಬಿಬಿಎಂಪಿಗೆ ನಿರ್ದೇಶಿಸಿದೆ.

‘ತೆರವು ಕಾರ್ಯಾಚರಣೆ ವಿಫಲವಾಗಿದೆ’

‘ಕರ್ನಾಟಕ ಪೌರಾಡಳಿತ ಕಾಯ್ದೆಯ ಕಲಂ 321ರ ಅಡಿ ಅಕ್ರಮ ಕಟ್ಟಡ ತೆರವುಗೊಳಿಸುವ ಅಧಿಕಾರ ಪಾಲಿಕೆ ಆಯುಕ್ತರಿಗೆ ಇದೆ. ಅಕ್ರಮ ಕಟ್ಟಡ ತೆರವುಗೊಳಿಸದೇ ಹೋದರೆ ಪಾಲಿಕೆ ಕರ್ತವ್ಯ ಚ್ಯುತಿ ಮಾಡಿದಂತೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ

* ಕೆರೆಗಳನ್ನು ನಾಶ ಮಾಡಿ ಸ್ಮಾರ್ಟ್ ಸಿಟಿ ನಿರ್ಮಿಸುವುದು ಸಾಧ್ಯವಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಕೆರೆ ನಾಶಕ್ಕೆ ಅವಕಾಶವಿಲ್ಲ. ಉತ್ತಮ ಗುಣಮಟ್ಟದ ಜೀವನಕ್ಕೆ ಕೆರೆಗಳೂ ಅವಶ್ಯ.
ಅಭಯ್‌.ಎಸ್. ಓಕಾ,ಮುಖ್ಯ ನ್ಯಾಯಮೂರ್ತಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.